ಮನೆ ಸುದ್ದಿ ಜಾಲ ರಾಜ ಋಷಿ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ ನೆನಪಿಗೆ ರಂಗೋತ್ಸವ: ವಿಶೇಷ ಛಾಯಾಚಿತ್ರ ಪ್ರದರ್ಶನ

ರಾಜ ಋಷಿ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ ನೆನಪಿಗೆ ರಂಗೋತ್ಸವ: ವಿಶೇಷ ಛಾಯಾಚಿತ್ರ ಪ್ರದರ್ಶನ

0

ಮೈಸೂರು(Mysuru): ನಾಡಹಬ್ಬ ದಸರಾ ಪ್ರಯುಕ್ತ ಹಲವಾರು ವಿಶೇಷ ಕಾರ್ಯಕ್ರಮಗಳು ಹಮ್ಮಿಕೊಳ್ಳುತ್ತಿರುವ ಈ ಸುಸಂದರ್ಭದಲ್ಲಿ ನಾಡನ್ನು ಸಾಕಷ್ಟು ಸುಭಿಕ್ಷವಾಗಿರಿಸುವಲ್ಲಿ ಹೆಚ್ಚೆಚ್ಚು ಕೊಡುಗೆಗಳನ್ನು ನೀಡುವ ಮೂಲಕ ಪ್ರಜೆಗಳ ಸೌಖ್ಯವನ್ನೇ ಬಯಸಿದಂತಹ ನಮ್ಮ ಧೀಮಂತ ಹೆಮ್ಮೆಯ ಮಹಾರಾಜರವರಾದ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರನ್ನು ಸ್ಮರಿಸಲಾಗಿದೆ

ನಗರದ ರಂಗಾಯಣದ ಆವರಣದಲ್ಲಿರುವ ಬಿ.ವಿ.ಕಾರಂತರ ಶಿಲ್ಪವನದಲ್ಲಿ  ರಾಜ ಋಷಿ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ ನೆನಪಿಗೆ ರಂಗೋತ್ಸವ ಎಂಬ ಹೆಸರಿನಲ್ಲಿ ಅ.೪ರವರೆಗೆ ಈ‌‌ ದಸರಾ ರಂಗೋತ್ಸವ ಪ್ರದರ್ಶನವನ್ನು ಆಯೋಜಿಸಲಾಗಿದ್ದು, ಅವರ ಹುಟ್ಟಿನಿಂದ ಹಿಡಿದು ಬಾಲ್ಯದ ಕೆಲವು ಆಯ್ದ ಕಾಲಘಟ್ಟಗಳ ಕುರಿತು ಮಾಹಿತಿಯುಳ್ಳ ಛಾಯಾಚಿತ್ರಗಳನ್ನು ಕಾಣಬಹುದಾಗಿದೆ.

ಪ್ರದರ್ಶನದಲ್ಲಿ ದಸರಾ ಸಂದರ್ಭದಲ್ಲಿ ನಾಲ್ವಡಿ‌ ಕೃಷ್ಣರಾಜ ಒಡೆಯರ್ ರವರು ಮತ್ತು ಕಂಠೀರವ ನರಸಿಂಹರಾಜ ಒಡೆಯರ್ ರವರು ಕುಳಿತಿರುವುದು, ಜಯಚಾಮರಾಜ ಒಡೆಯರ್ ರವರ ಉಪನಯನ, ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ದಸರಾ ವೀಕ್ಷಿಸುತ್ತಿರುವ ಸಂದರ್ಭದಲ್ಲಿ ಸೆರೆ ಸಿಕ್ಕಿರುವ ಛಾಯಾಚಿತ್ರ, ಕುದುರೆ ಸವಾರಿ, ಆಯುಧ‌ಪೂಜೆ ಸಂದರ್ಭದಲ್ಲಿ ಪೂಜೆ ಮಾಡುತ್ತಿರುವ ದೃಶ್ಯ, ದಸರಾ ದರ್ಬಾರ್ ಹಾಗೂ ಜಂಬೂ ಸವಾರಿಯ ಚಿತ್ರಗಳನ್ನು ಇಲ್ಲಿ ಕಣ್ತುಂಬಿಕೊಳ್ಳಬಹುದಾಗಿದೆ..

ಅಂತೆಯೇ ಮತ್ತೊಂದು ವಿಭಾಗದಲ್ಲಿ  ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಆಳ್ವಿಕೆ, ಅವರ ಪತ್ನಿಯವರಾದ ಮಹಾರಾಣಿ ಪ್ರತಾಪ ರುದ್ರಕುಮಾರಿ, ಕಂಠೀರವ ನರಸಿಂಹರಾಜ ಒಡೆಯರ್ ರೊಂದಿಗೆ ದಿವಾನ್ ಮಿರ್ಜಾ‌ ಇಸ್ಮಾಯಿಲ್ ಹಾಗೂ ಬ್ರಿಟಿಷ್ ಗಣ್ಯರೊಂದಿಗೆ ಶಿಕಾರಿಯ ಸಂದರ್ಭದಲ್ಲಿ ತೆಗೆದಿರುವಂತಹ ಛಾಯಾಚಿತ್ರಗಳನ್ನು ನೋಡಬಹುದಾಗಿರುತ್ತದೆ.

ಹೀಗೆ ದಸರಾ ಕಲಾಪದಿಂದ ಹಿಡಿದು, ಮಹಾರಾಣಿ ಪ್ರತಾಪ ರುದ್ರಕುಮಾರಿಯವರು ಗೌರಿ ಪೂಜೆ ಮಾಡುತ್ತಿರುವ ದೃಶ್ಯವು ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿರುವುದನ್ನು ನಾವಿಲ್ಲಿ ನೋಡಬಹುದಾಗಿದೆ.

ಅಷ್ಟೇ ಅಲ್ಲದೇ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಪಟ್ಟಾಭಿಷೇಕ ಮಹೋತ್ಸವದ ಆಹ್ವಾನ ಪತ್ರಿಕೆಯಿಂದ ಹಿಡಿದು, ಉಪನಯನ, ವಿವಾಹ ಮಹೋತ್ಸವ, ಅವರ ಸೋದರಿಯವರಾದ ಜಯಲಕ್ಷ್ಮಮ್ಮಣ್ಣಿ ಮತ್ತು ಕೃಷ್ಣಾಜಮ್ಮಣ್ಣಿಯವರ ವಿವಾಹ ಮಹೋತ್ಸವದ ರಾಜರ ಕಾಲದ ಆಹ್ವಾನ ಪತ್ರಿಕೆಯ ಅಚ್ಚನ್ನು ಇಲ್ಲಿ ನೋಡಬಹುದಾಗಿದೆ.

ಇದರೊಂದಿಗೆ ಮಹಾರಾಜರಿಗೆ ಸಾಕಷ್ಟು ಮನವಿಗಳು ಬರುತ್ತಿದ್ದು, ಅದರಲ್ಲಿ ಕೆಲವು ಆಯ್ದ ಮನವಿ ಪತ್ರಗಳು, ಅರ್ಜಿಗಳು ಹಾಗೂ ಟಿಪ್ಪಣಿಗಳ ಕುರಿತ ಚಿತ್ರ ಪ್ರದರ್ಶನವನ್ನು ಏರ್ಪಡಿಸಲಾಗುವ ಮೂಲಕ ನಾಡನ್ನಾಳಿದ ದೊರೆಗೆ ಅಭಿನಂದನೆ ತಿಳಿಸಲಾಗಿದೆ ಎಂದರೆ ತಪ್ಪಾಗಲಾರದು.