ಬೆಂಗಳೂರು: ದೇಶೀಯ ಕ್ರಿಕೆಟ್ ನ ಮಹಾ ಕೂಟ ರಣಜಿ ಟ್ರೋಫಿ ಇನ್ನು ಕೆಲವೇ ದಿನಗಳಲ್ಲಿ ಅರಂಭವಾಗಲಿದೆ. ಇದೀಗ ಮೊದಲೆರಡು ಪಂದ್ಯಗಳಿಗೆ ಕರ್ನಾಟಕ ತಂಡವನ್ನು ಆಯ್ಕೆ ಮಾಡಲಾಗಿದ್ದು, ಮಯಾಂಕ್ ಅಗರ್ವಾಲ್ ತಂಡ ಮುನ್ನಡೆಸಲಿದ್ದಾರೆ.
ರಣಜಿ ಕೂಟದಲ್ಲಿ ಕರ್ನಾಟಕವು ತನ್ನ ಮೊದಲ ಎರಡು ಪಂದ್ಯಗಳಲ್ಲಿ ಕ್ರಮವಾಗಿ ಮಧ್ಯಪ್ರದೇಶ ಮತ್ತು ಕೇರಳ ತಂಡಗಳನ್ನು ಎದುರಿಸಲಿದೆ. ಅ.11ರಿಂದ 14 ಮತ್ತು ಅ.18ರಿಂದ 21ರವರೆಗೆ ಈ ಪಂದ್ಯಗಳು ನಡೆಯಲಿದೆ.
ಮಧ್ಯಪ್ರದೇಶ ವಿರುದ್ದದ ಪಂದ್ಯವು ಇಂಧೋರ್ ನಲ್ಲಿ ನಡೆದರೆ, ಕೇರಳ ವಿರುದ್ದದ ಪಂದ್ಯವು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿದೆ.
ಈ ಬಾರಿಯ ಕೂಟಕ್ಕೆ ಬಲಿಷ್ಠ ತಂಡವನ್ನು ಕಟ್ಟಲಾಗಿದೆ. ಹಿರಿಯ ಮತ್ತು ಯುವ ಆಟಗಾರರನ್ನು ಸೇರಿಸಿಕೊಳ್ಳಲಾಗಿದೆ. ಮಹಾರಾಜ ಟ್ರೋಫಿಯಲ್ಲಿ ಮಿಂಚಿದ್ದ ಆಲ್ ರೌಂಡರ್ ಹಾರ್ದಿಕ್ ರಾಜ್, ಎಡಗೈ ವೇಗಿ ಅಭಿಲಾಶ್ ಶೆಟ್ಟಿ ಸ್ಥಾನ ಪಡೆದಿದ್ದಾರೆ. ಸಂಭಾವ್ಯ ಪಟ್ಟಿಯಲ್ಲಿದ್ದ ರಾಹುಲ್ ದ್ರಾವಿಡ್ ಪುತ್ರ ಸಮಿತ್ ದ್ರಾವಿಡ್ ಗೆ ಅವಕಾಶ ಸಿಕ್ಕಿಲ್ಲ.
ಕರ್ನಾಟಕ ತಂಡ: ಮಯಾಂಕ್ ಅಗರ್ವಾಲ್ (ನಾ), ನಿಕಿನ್ ಜೋಸ್, ದೇವದತ್ತ ಪಡಿಕ್ಕಲ್, ಸ್ಮರಣ್ ಆರ್, ಮನೀಶ್ ಪಾಂಡೆ (ಉ.ನಾ), ಶ್ರೇಯಸ್ ಗೋಪಾಲ್, ಸುಜಯ್ ಸತೇರಿ (ವಿ.ಕೀ), ಹಾರ್ದಿಕ್ ರಾಜ್, ವೈಶಾಖ್ ವಿಜಯಕುಮಾರ್, ಪ್ರಸಿಧ್ ಕೃಷ್ಣ, ಕೌಶಿಕ್ ವಿ, ಲವ್ನಿತ್ ಸಿಸೋಡಿಯಾ (ವಿ.ಕೀ), ಮೊಹ್ನಿನ್ ಖಾನ್, ವಿದ್ಯಾಧರ್ ಪಾಟೀಲ್, ಕಿಶನ್ ಎಸ್ ಬಿದರೆ, ಅಭಿಲಾಶ್ ಶೆಟ್ಟಿ.