ಮನೆ ಕಾನೂನು ಅಪ್ರಾಪ್ತ ಪುತ್ರಿಯ ಮೇಲೆ ತಂದೆಯಿಂದಲೇ ಅತ್ಯಾಚಾರ; 10 ವರ್ಷ ಜೈಲು ಶಿಕ್ಷೆ ವಿಧಿಸಿದ ಹೈಕೋರ್ಟ್‌

ಅಪ್ರಾಪ್ತ ಪುತ್ರಿಯ ಮೇಲೆ ತಂದೆಯಿಂದಲೇ ಅತ್ಯಾಚಾರ; 10 ವರ್ಷ ಜೈಲು ಶಿಕ್ಷೆ ವಿಧಿಸಿದ ಹೈಕೋರ್ಟ್‌

0

ಹದಿನಾಲ್ಕು ವರ್ಷದ ತನ್ನ ಪುತ್ರಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದಾತನಿಗೆ 10 ವರ್ಷ ಜೈಲು ಶಿಕ್ಷೆ ಮತ್ತು ₹50 ಸಾವಿರ ದಂಡ ವಿಧಿಸಿ ಕರ್ನಾಟಕ ಹೈಕೋರ್ಟ್‌ನ ಧಾರವಾಡ ಪೀಠವು ಈಚೆಗೆ ತೀರ್ಪು ನೀಡಿದೆ (ಕರ್ನಾಟಕ ರಾಜ್ಯ ವರ್ಸಸ್ಆಸೀಫ್ರಸೂಲ್ಸಾಬ್ಸನದಿ).

ಅತ್ಯಾಚಾರ ಆರೋಪಿಯನ್ನು ಖುಲಾಸೆಗೊಳಿಸಿದ್ದ ವಿಶೇಷ ನ್ಯಾಯಾಲಯದ ತೀರ್ಪು ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿಗಳಾದ ಎಚ್ಟಿ ನರೇಂದ್ರ ಪ್ರಸಾದ್‌ ಮತ್ತು ರಾಜೇಂದ್ರ ಬಾದಾಮಿಕರ್ ಅವರಿದ್ದ ವಿಭಾಗೀಯ ಪೀಠವು ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್‌ 376(1) ಮತ್ತು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ರಕ್ಷಣಾ ಕಾಯಿದೆ (ಪೋಕ್ಸೊ) ಸೆಕ್ಷನ್‌ 6 ಅಡಿ ಆರೋಪವನ್ನು ಎತ್ತಿ ಹಿಡಿದಿದೆ.

“ಅನಾಗರಿಕ ನಡತೆಯಿಂದ ಬಾಲಕಿ ಅನುಭವಿಸಿರುವ ಆಘಾತವನ್ನು ನ್ಯಾಯಾಲಯ ಲಘುವಾಗಿ ಪರಿಗಣಿಸಲಾಗದು. ಸಂತ್ರಸ್ತೆಯ ಸಾಕ್ಷಿ ಸ್ಥಿರ ಮತ್ತು ವಿಶ್ವಾಸಾರ್ಹವಾಗಿರುವ ಪ್ರಕರಣದಲ್ಲಿ ನ್ಯಾಯಾಲಯಗಳು ಸೂಕ್ಷ್ಮವಾಗಿರಬೇಕಾಗುತ್ತದೆ. ಇಂಥ ಸಂದರ್ಭದಲ್ಲಿ ವಿಚಾರಣಾಧೀನ ನ್ಯಾಯಾಲಯದ ನಡೆಯು ಆರಂಭದಿಂದಲೂ ದೋಷಪೂರಿತವಾಗಿದ್ದು, ವಿಚಿತ್ರವಾಗಿದೆ. ವಿಚಾರಣಾಧೀನ ನ್ಯಾಯಾಲಯವು ಸಂತ್ರಸ್ತೆ ಬಾಲಕಿಯನ್ನು ಪೂರ್ವಾಗ್ರಹ ಪೀಡಿತವಾಗಿ ಕಂಡಿದೆ. ಇದನ್ನು ಒಪ್ಪಲಾಗದು” ಎಂದು ಹೈಕೋರ್ಟ್‌ ಆದೇಶದಲ್ಲಿ ಹೇಳಿದೆ.

ಸಾಕ್ಷಿಗಳ ಹೇಳಿಕೆಯನ್ನು ಸೂಕ್ತವಾಗಿ ಪರಿಗಣಿಸಲು ಮತ್ತು ಸಾಕಷ್ಟು ಸಮಯ ಕಳೆದ ನಂತರ ಪಾಟಿ ಸವಾಲು ನಡೆಸಲು ಅನುಮತಿಸುವಾಗ ವಿಚಾರಣಾಧೀನ ನ್ಯಾಯಾಲಯ ಎಡವಿದೆ ಎಂದು ಹೈಕೋರ್ಟ್‌ ಹೇಳಿದೆ.

ಹೆಚ್ಚುವರಿ ವಿಶೇಷ ಸರ್ಕಾರಿ ಅಭಿಯೋಜಕ ವಿ ಎಂ ಬಣಕಾರ್ ಅವರು “ಪುತ್ರಿಯ ತಾಯಿ ಮೂಕಿ ಮತ್ತು ಶ್ರವಣ ದೋಷಕ್ಕೆ ತುತ್ತಾಗಿದ್ದು, ನಿರಂತರವಾಗಿ ಒಂಭತ್ತು ತಿಂಗಳು ಪುತ್ರಿಯ ಮೇಲೆ ಆರೋಪಿ ಲೈಂಗಿಕ ದೌರ್ಜನ್ಯ ಎಸಗಿದ್ದಲ್ಲದೇ ಇದೇ ಕಾರಣಕ್ಕಾಗಿ ಆಕೆಯನ್ನು ಕಾನೂನುಬಾಹಿರವಾಗಿ ಗೃಹ ಬಂಧನದಲ್ಲಿಟ್ಟಿದ್ದನು” ಎಂದು ಆಪಾದಿಸಿದ್ದರು.

ತಾತನ ಮನೆಯಲ್ಲಿದ್ದ ಪುತ್ರಿಯನ್ನು ಕರೆತರಲು ಆರೋಪಿ ಹೋಗಿದ್ದನು. ಆಗ ಪುತ್ರಿ ಆತನ ಜೊತೆ ಬರಲು ನಿರಾಕರಿಸಿದ್ದು, ಆತ ನೀಡುತ್ತಿದ್ದ ಕಿರುಕುಳದ ಬಗ್ಗೆ ಅಜ್ಜಿಗೆ ವಿವರಿಸಿದ್ದಳು. ಇದನ್ನು ಆಧರಿಸಿ ಅಜ್ಜಿಯು ಮೊಮ್ಮಗಳಿಂದ ದೂರು ದಾಖಲಿಸಿದ್ದರು.

ದೂರಿನ ಆಧಾರದಲ್ಲಿ ಅರೋಪಿಯ ವಿರುದ್ಧ ಐಪಿಸಿ ಸೆಕ್ಷನ್‌ 376(1) (ಅತ್ಯಾಚಾರ), 342 (ಅಕ್ರಮ ವಶ) ಮತ್ತು 506 (ಕ್ರಿಮಿನಲ್‌ ಬೆದರಿಕೆ), ಪೋಕ್ಸೊ ಕಾಯಿದೆಯ ಸೆಕ್ಷನ್‌ಗಳಾದ 4 (ಸಂಭೋಗದ ಮೂಲಕ ದೌರ್ಜನ್ಯ) 8 (ಲೈಂಗಿಕ ದೌರ್ಜನ್ಯ) ಮತ್ತು 12ರ (ಲೈಂಗಿಕ ಕಿರುಕುಳ) ಅಡಿ ತನಿಖೆ ನಡೆಸಿ, ಪೊಲೀಸರು ಆರೋಪ ಪಟ್ಟಿ ಸಲ್ಲಿಸಿದ್ದರು.

ವಾದ-ಪ್ರತಿವಾದ ಆಲಿಸಿದ್ದ ವಿಚಾರಣಾಧೀನ ನ್ಯಾಯಾಲಯದ ವಿಶೇಷ ನ್ಯಾಯಾಧೀಶರು ಸಂತ್ರಸ್ತೆ, ಆಕೆಯ ಅಜ್ಜಿ, ಇತರೆ ಸಾಕ್ಷಿಗಳು ಹಾಗೂ ವೈದ್ಯಕೀಯ ಸಾಕ್ಷಿ ನಂಬಲರ್ಹವಾಗಿಲ್ಲ ಎಂದು ಹೇಳಿ, ಆರೋಪಿಯನ್ನು ಖುಲಾಸೆಗೊಳಿಸಿದ್ದರು. ಇದನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಮೇಲ್ಮನವಿ ಸಲ್ಲಿಸಿತ್ತು. ಇದನ್ನು ಪುರಸ್ಕರಿಸಿ ಹೈಕೋರ್ಟ್‌ ಶಿಕ್ಷೆ ವಿಧಿಸಿದೆ.