ನಟನೆಗೆ ಅವಕಾಶ ನೀಡುವ ನೆಪದಲ್ಲಿ ತನ್ನನ್ನು ಲೈಂಗಿಕವಾಗಿ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿ ನವ ನಟಿಯೊಬ್ಬರು ಮಾಡಿದ್ದ ಆರೋಪಕ್ಕೆ ಸಂಬಂಧಿಸಿದಂತೆ ದಾಖಲಾಗಿದ್ದ ಅತ್ಯಾಚಾರ ಪ್ರಕರಣದಲ್ಲಿ ಮಲಯಾಳಂನ ನಟ-ನಿರ್ಮಾಪಕ ವಿಜಯ್ ಬಾಬುಗೆ ಕೇರಳ ಹೈಕೋರ್ಟ್ ಬುಧವಾರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ನ್ಯಾಯಮೂರ್ತಿ ಬೆಚು ಕುರಿಯನ್ ಥಾಮಸ್ ಅವರು ಕೆಲವು ಷರತ್ತು ಬದ್ಧ ನಿರೀಕ್ಷಣಾ ಜಾಮೀನು ನೀಡಿದರು.
“ಪ್ರಕರಣದ ಸನ್ನಿವೇಶಗಳನ್ನು ಪರಿಗಣಿಸಿ, ಸುಶೀಲ್ ಅಗರ್ವಾಲ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನ ಪ್ರಕಾರ ತನಿಖಾಧಿಕಾರಿಗೆ ಇರುವ ಸೀಮಿತ ಬಂಧನ ಅವಕಾಶದ ಷರತ್ತಿಗೆ ಒಳಪಟ್ಟು ನಿರೀಕ್ಷಣಾ ಜಾಮೀನು ನೀಡಬಹುದು ಎಂದು ಭಾವಿಸುತ್ತೇನೆ” ಎಂದು ಅವರು ತಿಳಿಸಿದರು.
ಎಫ್ಐಆರ್ ದಾಖಲಾದ ತರುವಾಯ ತಲೆಮರೆಸಿಕೊಂಡಿದ್ದರಿಂದ ಕೇರಳ ಪೊಲೀಸರು ವಿಜಯ್ ಪತ್ತೆಗಾಗಿ ಲುಕೌಟ್ ನೋಟಿಸ್ ನೀಡಿದ್ದರು. ಈ ಮಧ್ಯೆ ಫೇಸ್ಬುಕ್ ನೇರಪ್ರಸಾರದ ಮೂಲಕ ತನ್ನ ವಿರುದ್ಧದ ಆರೋಪ ನಿರಾಕರಿಸುವ ವೇಳೆ ಸಂತ್ರಸ್ತೆಯ ಹೆಸರನ್ನು ಬಹಿರಂಗಪಡಿಸಿದ್ದರಿಂದ ಅವರ ವಿರುದ್ಧ ಐಪಿಸಿ ಸೆಕ್ಷನ್ 228 ಎ ಅಡಿ ಕೂಡ ಪ್ರಕರಣ ದಾಖಲಿಸಲಾಗಿತ್ತು. ಭಾರೀ ಟೀಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಲೈವ್ ವೀಡಿಯೊವನ್ನು ಅವರು ಫೇಸ್ಬುಕ್ ಖಾತೆಯಿಂದ ಅಳಿಸಿಹಾಕಿದ್ದರು.
[ವಿಜಯ್ ಬಾಬು ಮತ್ತು ಕೇರಳ ಸರ್ಕಾರ ನಡುವಣ ಪ್ರಕರಣ].