ಚನ್ನಗಿರಿ (ದಾವಣಗೆರೆ): ಬಾಲಕಿಯೂ ಸೇರಿ ಹಲವು ಮಹಿಳೆಯರ ಮೇಲೆ ಅತ್ಯಾಚಾರ ಎಸಗಿ, ಆ ದೃಶ್ಯವನ್ನು ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೊ ಹರಿಬಿಟ್ಟ ಪ್ರಕರಣದ ಆರೋಪಿ ಅಮ್ಜದ್ ಕೃತ್ಯ ಖಂಡಿಸಿ ಸೋಮವಾರ ಕರೆನೀಡಿರುವ ಚನ್ನಗಿರಿ ಬಂದ್ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಬಜರಂಗದಳ ಹಾಗೂ ಸಂಘಪರಿವಾರದ ಹಲವು ಸಂಘಟನೆಗಳು ಕರೆನೀಡಿದ ಬಂದ್‌ಗೆ ಪಟ್ಟಣದ ಜನರು ಸ್ಪಂದಿಸಿದ್ದಾರೆ. ಅಂಗಡಿಗಳು ಬಾಗಿಲು ಮುಚ್ಚಿದ್ದು ಜನಸಂಚಾರ ವಿರಳವಾಗಿದೆ. ಖಾಸಗಿ ಹಾಗೂ ಕೆಎಸ್‌ಆರ್‌ಟಿಸಿ ಬಸ್ ಸಂಚಾರ ಎಂದಿನಂತೆ ಇದೆ. ಆದರೆ, ಪ್ರಯಾಣಿಕರ ಸಂಖ್ಯೆ ಕಡಿಮೆ ಇದೆ.
ಬಂದ್ ಅಂಗವಾಗಿ ಶಾಲಾ- ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಸರ್ಕಾರಿ ಕಚೇರಿಗಳು ಎಂದಿನಂತೆ ಬಾಗಿಲು ತೆರೆದಿವೆ. ಆರೋಪಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಒತ್ತಾಯಿಸಿ ಮಾಜಿ ಸಂಸದ ಜಿ.ಎಂ.ಸಿದ್ದೇಶ್ವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ. ನ್ಯಾಯಾಲಯದ ಕಲಾಪದಿಂದ ಹೊರಗುಳಿದ ವಕೀಲರು ಬಂದ್‌ಗೆ ಸಹಕರಿಸಿದ್ದಾರೆ.














