ಮನೆ ಮನರಂಜನೆ ಅತ್ಯಾಚಾರ ಪ್ರಕರಣ: ಜಾಮೀನಿನ ಮೇಲೆ ಬಿಡುಗಡೆಗೊಂಡ ಮಡೆನೂರು ಮನು

ಅತ್ಯಾಚಾರ ಪ್ರಕರಣ: ಜಾಮೀನಿನ ಮೇಲೆ ಬಿಡುಗಡೆಗೊಂಡ ಮಡೆನೂರು ಮನು

0

ಬೆಂಗಳೂರು: ಕಾಮಿಡಿ ಕಿಲಾಡಿಗಳು ಖ್ಯಾತಿಯ ನಟ ಮಡೆನೂರು ಮನು ಅತ್ಯಾಚಾರ ಆರೋಪದ ಪ್ರಕರಣದಲ್ಲಿ ಜಾಮೀನಿನ ಮೇಲೆ ಪರಪ್ಪನ ಅಗ್ರಹಾರ ಜೈಲಿನಿಂದ ಇಂದು ಬಿಡುಗಡೆಯಾದ ಹಿನ್ನಲೆಯಲ್ಲಿ, ಮಾಧ್ಯಮದವರ ಮುಂದೆ ಬಂದು ತಮ್ಮ ಮೌನ ಮುರಿದಿದ್ದಾರೆ. ತಮ್ಮ ವಿರುದ್ಧ ನಡೆದ ಪ್ರಕರಣವನ್ನು ಷಡ್ಯಂತ್ರವೆಂದು ವಿವರಿಸಿದ ಅವರು, ಆಡಿಯೋ ಕ್ಲಿಪ್ ಹಾಗೂ ತಮ್ಮ ಮೇಲೆ ಹೊರಿಸಲಾಗಿರುವ ಆರೋಪಗಳನ್ನು ತಳ್ಳಿ ಹಾಕಿದ್ದಾರೆ.

ಮನು ಅವರು ಮಾಧ್ಯಮದವರೊಂದಿಗೆ ಮಾತನಾಡುತ್ತಾ, “ಶಿವಣ್ಣ, ದರ್ಶನ್ ಹಾಗೂ ಧ್ರುವ ಸರ್ಜಾ ಬಗ್ಗೆ ಮಾತನಾಡುತ್ತಿರುವ ಆಡಿಯೋ ನನ್ನದು ಅಲ್ಲ. ಅದು ಯಾರೋ ತಯಾರಿಸಿದ ಕೃತಕ ಧ್ವನಿ. ಮೊದಲಿಗೆ ನಾನು ನಟ ಶಿವರಾಜ್ ಕುಮಾರ್ ಅವರನ್ನು ಭೇಟಿಯಾಗಿ ಸತ್ಯ ಪರಿಸ್ಥಿತಿಯನ್ನು ವಿವರಿಸಬೇಕು” ಎಂದು ಪ್ರತಿಕ್ರಿಯಿಸಿದ್ದಾರೆ.

ಮೂರು ವರ್ಷಗಳ ಶ್ರಮವನ್ನು ಹಾಳು ಮಾಡಿದ್ದಾರೆ. ಐದಾರು ಮಂದಿ ಸೇರಿಕೊಂಡು ನನ್ನ ಮೇಲೆ ಪ್ಲಾನ್ ಮಾಡಿ ಈ ರೀತಿ ಮಾಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಸಿನಿಮಾ ರಿಲೀಸ್ ಆದಾಗಲೆಲ್ಲ ಈ ರೀತಿಯ ಅಪಪ್ರಚಾರ ನಡೆಯುತ್ತಿದೆ. ಈ ಬಾರಿ ಅದನ್ನು ಮತ್ತಷ್ಟು ಗಂಭೀರವಾಗಿ ತೋರಿಸಲು ನನಗೇ ತಪ್ಪು ಹೊರೆ ಹಾಕಲಾಗಿದೆ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಅದಷ್ಟೇ ಅಲ್ಲ, “ಚಿತ್ರ ಬಿಡುಗಡೆಯ ದಿನದಂದೇ ನನ್ನ ಮೇಲೆ ಹಲ್ಲೆ ನಡೆಸಿ, ಬಟ್ಟೆ ಹರಿದು, ಕುಣಿಗಲ್ ಬಳಿ ಮೊಟ್ಟೆ ಎಸೆದ ಘಟನೆ ನಡೆದಿದೆ. ಇದು ಎಲ್ಲವೂ ಸೂಕ್ಷ್ಮವಾಗಿ ಆಯೋಜಿಸಲಾದ ರಾಜಕೀಯ ನಾಟಕ” ಎಂದು ಆರೋಪಿಸಿದ್ದಾರೆ.

“ಅವರು ನನ್ನ ಮೇಲೆ ಕೇಸ್ ಹಾಕಿದರು. ಏನೇ ಆದರೂ ನಾನು ಕಾನೂನು ಹೋರಾಟ ಮಾಡುತ್ತೇನೆ. ನ್ಯಾಯಾಲಯದ ಮೇಲೆ ನನಗೆ ನಂಬಿಕೆ ಇದೆ. ಕಲಾತಾಯಿ ಶಾರದೆಯು ನನ್ನ ಕೈ ಬಿಡುವುದಿಲ್ಲ” ಎಂದು ಅವರು ವಿಶ್ವಾಸದ ಧ್ವನಿಯಲ್ಲಿ ಹೇಳಿದರು.

“ನನ್ನ ವಿರುದ್ಧ ನಡೆದಿರುವ ಎಲ್ಲ ಕೃತ್ಯಗಳು ಕೇವಲ ವ್ಯಕ್ತಿಗತ ದ್ವೇಷದ ಫಲ. ಇದು ನನಗೆ ಮಾತ್ರವಲ್ಲ, ನನ್ನ ಕುಟುಂಬಕ್ಕೂ ನೋವು ತಂದಿದೆ. ಆದರೆ ಸತ್ಯದ ಮೇಲಿನ ನಂಬಿಕೆ ನನ್ನಲ್ಲಿ ಇನ್ನೂ ಜೀವಂತವಾಗಿದೆ” ಎಂದು ಅವರು ಬಲವಾಗಿ ಹೇಳಿದ್ದಾರೆ.