ಲಕ್ನೋ: ಉತ್ತರ ಪ್ರದೇಶದ ಲಕ್ನೋನಲ್ಲಿ ಮೂರು ವರ್ಷದ ಬಾಲಕಿಯ ಮೇಲೆ ನಡೆದ ಅಮಾನವೀಯ ಅತ್ಯಾಚಾರ ಪ್ರಕರಣ ಬೆನ್ನಲ್ಲೇ ಪೊಲೀಸರು ಆರೋಪಿಯ ವಿರುದ್ಧ ತ್ವರಿತ ಕ್ರಮ ಕೈಗೊಂಡಿದ್ದು, 24 ಗಂಟೆಯೊಳಗೆ ಎನ್‌ಕೌಂಟರ್ ಮೂಲಕ ಕೊನೆಗೊಳಿಸಿದ್ದಾರೆ. ದೀಪಕ್ ವರ್ಮಾ ಎಂಬ ಆರೋಪಿ ಪೊಲೀಸ್ ಗುಂಡಿಗೆ ಬಲಿಯಾಗಿದ್ದಾನೆ.
ಅಲಂಬಾಗ್ ಮೆಟ್ರೋ ನಿಲ್ದಾಣದ ಬಳಿಯ ಸೇತುವೆಯ ಕೆಳಗೆ ತಾಯಿಯ ಜೊತೆ ಮಲಗಿದ್ದ ಮೂರು ವರ್ಷದ ಬಾಲಕಿಯನ್ನು ಮಧ್ಯ ರಾತ್ರಿ ಅಪಹರಿಸಲಾಗಿದೆ. ಸಿಸಿ ಕ್ಯಾಮೆರಾ ದೃಶ್ಯಾವಳಿಗಳ ಪ್ರಕಾರ, ಬೆಳಗ್ಗಿನ ಜಾವ 3:30ರ ಸಮಯದಲ್ಲಿ ಆರೋಪಿ ದೀಪಕ್ ವರ್ಮಾ ಸ್ಕೂಟರ್‌ನಲ್ಲಿ ಬಾಲಕಿಯನ್ನು ಅಪಹರಿಸಿ ಪರಾರಿಯಾಗಿದ್ದಾನೆ.
ಈ ಅಮಾನವೀಯ ಕೃತ್ಯ ಬೆಳಕಿಗೆ ಬಂದ ತಕ್ಷಣವೇ ಲಕ್ನೋ ಪೊಲೀಸರ ತಂಡ ಕಾರ್ಯಾಚರಣೆ ಆರಂಭಿಸಿತು. ಹಲವು ತಂಡಗಳನ್ನು ರಚಿಸಿ ಕಾರ್ಯಾಚರಣೆ ನಡೆಸಿತು. ದೀಪಕ್‌ನ ಬಂಧನಕ್ಕೆ ಮಾಹಿತಿ ನೀಡಿದವರಿಗೆ 1 ಲಕ್ಷ ರೂಪಾಯಿ ಬಹುಮಾನವೂ ಘೋಷಿಸಲಾಯಿತು. ಸ್ಕೂಟರ್‌ನ ನೋಂದಣಿ ವಿವರಗಳ ಮೂಲಕ ಪತ್ತೆ ಹಚ್ಚಿದ ಪೊಲೀಸರು, ಕಂಟೋನ್ಮೆಂಟ್‌ನ ದೇವಿ ಖೇಡಾ ಬಳಿ ಆರೋಪಿಯನ್ನು ತಡೆಯಲು ಮುಂದಾದರು.
ಪೊಲೀಸರು ಶರಣಾಗು ಎಂದು ಸೂಚಿಸಿದರೂ ದೀಪಕ್ ಪೊಲೀಸರ ಮೇಲೆಯೇ ಗುಂಡು ಹಾರಿಸಿದ್ದಾನೆ. ಆತ್ಮರಕ್ಷಣೆಯ ಕ್ರಮವಾಗಿ ಪೊಲೀಸರು ಪ್ರತಿದಾಳಿ ನಡೆಸಿ ಗುಂಡು ಹಾರಿಸಿದರು. ಗಂಭೀರವಾಗಿ ಗಾಯಗೊಂಡಿದ್ದ ದೀಪಕ್ ಅನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ವೈದ್ಯರು ಆತನನ್ನು ಮೃತ ಎಂದು ಘೋಷಿಸಿದರು.
ಅತ್ಯಾಚಾರದ ಘಟನೆ ಬೆನ್ನಲ್ಲೇ ಆಸ್ಪತ್ರೆಗೆ ದಾಖಲಿಸಲಾದ ಬಾಲಕಿಯ ಸ್ಥಿತಿ ಗಂಭೀರವಾಗಿದೆ. ಬಾಲಕಿಯ ಖಾಸಗಿ ಅಂಗಗಳಿಗೆ ತೀವ್ರ ಗಾಯಗಳಾಗಿದ್ದು, ಗಣನೀಯ ಪ್ರಮಾಣದಲ್ಲಿ ರಕ್ತಸ್ರಾವವಾಗಿದೆ. ವೈದ್ಯರ ಪ್ರಕಾರ ಪ್ಲಾಸ್ಟಿಕ್ ಶಸ್ತ್ರಚಿಕಿತ್ಸೆ ಅಗತ್ಯವಾಗಿದೆ. ಲಕ್ನೋನ ಲೋಕಬಂಧು ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.
ದೀಪಕ್ ವರ್ಮಾ ಹಲವಾರು ಕ್ರಿಮಿನಲ್ ಹಿನ್ನೆಲೆಯನ್ನೂ ಹೊಂದಿದ್ದು, ಲಕ್ನೋ ಪೊಲೀಸ್ ಠಾಣೆಗಳಲ್ಲಿ ಹಲವು ಕ್ರಿಮಿನಲ್ ಪ್ರಕರಣಗಳಲ್ಲಿ ಆರೋಪಿಯಾಗಿದ್ದ.














