ವಿಜಯಪುರ: ಪತ್ನಿಯ ಅಪ್ರಾಪ್ತ ವಯಸ್ಸಿನ ಸಹೋದರಿ ಮೇಲೆ ಅತ್ಯಾಚಾರ ಎಸಗಿದವನಿಗೆ ಇಲ್ಲಿನ ವಿಶೇಷ ಪೋಕ್ಸೋ ನ್ಯಾಯಾಲಯ 20 ವರ್ಷ ಜೀವಾವಧಿ ಶಿಕ್ಷೆ ಹಾಗೂ 26,000 ರೂ. ದಂಡ ವಿಧಿಸಿ ಆದೇಶ ಹೊರಡಿಸಿದೆ.
ಅಪರಾಧಿಯು ತಾಳಿಕೋಟೆ ತಾಲೂಕಿನ ಯುವತಿಯನ್ನು ವಿವಾಹವಾಗಿದ್ದನು. ಈತ ಟ್ಯಾಕ್ಸಿ ಚಾಲಕನಾಗಿದ್ದು, ಬೆಂಗಳೂರಿನಲ್ಲಿ ವಾಸವಾಗಿದ್ದ. ಈತನ ಪತ್ನಿಗೆ ಅಪ್ರಾಪ್ತ ವಯಸ್ಸಿನ ಇಬ್ಬರು ಸಹೋದರಿಯರು ಇದ್ದರು. ಅವರು ಇನ್ನೂ ಶಾಲಾ ವಿದ್ಯಾರ್ಥಿಗಳು.2020ರ ಮಾರ್ಚ್‌ನಲ್ಲಿ ಸಂಬಂಧಿಕರ ಮದುವೆಗೆಂದು ಅಪರಾಧಿ ಹಾಗು ಆತನ ಪತ್ನಿ ತಾಳಿಕೋಟೆಗೆ ಬಂದಿದ್ದರು. ಈ ವೇಳೆ ಕೊರೊನಾ ಸೋಂಕು ಹರಡಿದ್ದ ಕಾರಣ ಬಸ್‌ಗಳು ಬಂದ್ ಆಗಿದ್ದವು. ಹೀಗಾಗಿ ಬೆಂಗಳೂರಿಗೆ ವಾಪಸ್ ಆಗಲು ಸಾಧ್ಯವಾಗಿರಲಿಲ್ಲ. ಈ ವೇಳೆ ಪತ್ನಿಯ ಇಬ್ಬರು ಸಹೋದರಿಯರಲ್ಲಿ ಒಬ್ಬಳನ್ನು ಅಪರಾಧಿ ಮನೆಯಲ್ಲಿ, ಇನ್ನೊಬ್ಬಳನ್ನು ಸಂಬಂಧಿಕರ ಮನೆಯಲ್ಲಿ ಬಿಟ್ಟಿದ್ದರು.2020 ಏಪ್ರಿಲ್ 18ರಂದು ಪತ್ನಿ ಮಾರ್ಕೆಟ್‌ಗೆ ಹೋದಾಗ ಅಪರಾಧಿ ಹಾಗೂ ಅಪ್ರಾಪ್ತೆ ಇಬ್ಬರೇ ಮನೆಯಲ್ಲಿ ಇದ್ದರು. ಈ ವೇಳೆ ಆಕೆಯ ಮೇಲೆ ಈತ ಅತ್ಯಾಚಾರ ಎಸಗಿದ್ದನು. ಈ ವಿಷಯವನ್ನು ಯಾರಿಗಾದರೂ ಹೇಳಿದರೆ ನಿಮ್ಮ ಅಕ್ಕ, ತಂದೆ, ತಾಯಿಯನ್ನು ಕೊಲೆ ಮಾಡುತ್ತೇವೆ ಎಂದು ಬೆದರಿಸಿದ್ದನು. ಕೆಲ ದಿನಗಳ ನಂತರ ಬೆಂಗಳೂರಿಗೆ ಹೋಗಿದ್ದರು. ಇದಾಗಿ ಮತ್ತೆ ಬೆಂಗಳೂರಿನಲ್ಲಿ ಕೊರೊನಾ ಉಲ್ಬಣವಾಗಿದ್ದರಿಂದ ಬೆಂಗಳೂರಿನಿಂದ ವಾಪಸ್ ತಮ್ಮ ಊರಿಗೆ ಅಪರಾಧಿ ಹಾಗು ಆತನ ಪತ್ನಿ ತೆರಳಿದ್ದರು. ಈ ಅಪರಾಧಿ ಮತ್ತೆ ಅಪ್ರಾಪ್ತೆ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದನು. ಈ ವಿಷಯ ಮನೆಯವರಿಗೆ ಗೊತ್ತಾಗಿ ಆತನ ವಿರುದ್ಧ ತಾಳಿಕೋಟೆ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿತ್ತು.
ಪ್ರಕರಣದ ತನಿಖೆ ನಡೆಸಿದ ಪೊಲೀಸರು ಪೋಕ್ಸೋ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶ ರಾಮನಾಯಕ ಅವರು ಆರೋಪ ಸಾಬೀತಾದ ಕಾರಣ ತಪ್ಪಿತಸ್ಥನಿಗೆ 20 ವರ್ಷಗಳ ಜೀವಾವಧಿ ಶಿಕ್ಷೆ ಹಾಗೂ 26,000 ರೂ. ದಂಡ ವಿಧಿಸಿದ್ದಾರೆ. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ವಿ ಜಿ ಹಗರಗುಂಡ ವಾದ ಮಂಡಿಸಿದ್ದರು.