ಬೆಂಗಳೂರು: 17 ವರ್ಷದ ಅತ್ಯಾಚಾರ ಸಂತ್ರಸ್ತೆಗೆ ಸಹಾಯ ಮಾಡುವ ನೆಪದಲ್ಲಿ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಪೊಲೀಸ್ ಕಾನ್‌ಸ್ಟೆಬಲ್ ಸೇರಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಕಾನ್‌ಸ್ಟೆಬಲ್ ಆಗಿದ್ದ ಆರೋಪಿ ಅರುಣ್ ತೊನೆಪ ಮತ್ತು ಸಂತ್ರಸ್ತೆಯ ಗೆಳೆಯ ವಿಕ್ಕಿಯನ್ನು ಮೈಕೋ ಲೇಔಟ್ ಪೊಲೀಸರು ಬಂಧಿಸಿದ್ದಾರೆ.
ಸಂತ್ರಸ್ತೆಯ ತಾಯಿ ಬೊಮ್ಮನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದಾಗ, ಸಂತ್ರಸ್ತೆಗೆ ಸಹಾಯ ಮಾಡುವ ನೆಪದಲ್ಲಿ ಕಾನ್‌ಸ್ಟೆಬಲ್ ಅರುಣ್, ಸಂತ್ರಸ್ತೆಗೆ ಆಪ್ತರಾಗಿದ್ದು, ನಂತರ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಸಂತ್ರಸ್ತೆ ತಾಯಿ ಆರೋಪಿಸಿದ್ದಾರೆ.
ಫೆಬ್ರವರಿ 13 ರಂದು ಮೈಕೋ ಲೇಔಟ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಎಫ್‌ಐಆರ್ ಪ್ರಕಾರ, ನೆರೆಮನೆಯ ವಿಕ್ಕಿ ತನ್ನ ಮಗಳನ್ನು ಮದುವೆಯಾಗುವುದಾಗಿ ಭರವಸೆ ನೀಡಿ, ಪದೇ ಪದೇ ಲೈಂಗಿಕ ದೌರ್ಜನ್ಯ ಎಸಗಿದ್ದ ಮತ್ತು ನಂತರ ಮೇ 2024 ರಲ್ಲಿ ಆಕೆ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿ ಬೆದರಿಕೆ ಹಾಕಿದ್ದು, ಈ ಸಂಬಂಧ ದೂರು ನೀಡಲು ಡಿಸೆಂಬರ್ 18 ರಂದು ಸಂತ್ರಸ್ತೆ ಮತ್ತು ಆಕೆಯ ತಾಯಿ ಬೊಮ್ಮನಹಳ್ಳಿ ಪೊಲೀಸ್ ಠಾಣೆಗೆ ತೆರಳಿದ್ದರು. ಪ್ರಕರಣದಲ್ಲಿ ಆಕೆಗೆ ಸಹಾಯ ಮಾಡುವುದಾಗಿ ಮತ್ತು ಉದ್ಯೋಗ ದೊರಕಿಸಿಕೊಡುವುದಾಗಿ ಕಾನ್‌ಸ್ಟೆಬಲ್ ಅರುಣ್ ಭರವಸೆ ನೀಡಿದ್ದರು.
ನಂತರ, ಒಂದು ವಾರದ ಅವಧಿಯಲ್ಲಿ, ಕಾನ್‌ಸ್ಟೆಬಲ್ ಆಕೆಯನ್ನು ಬಿಟಿಎಂ ಲೇಔಟ್‌ನಲ್ಲಿರುವ ಹೋಟೆಲ್ ಕೋಣೆಗೆ ಮೂರು ಬಾರಿ ಕರೆದೊಯ್ದು, ಮದ್ಯ ಸೇವಿಸುವಂತೆ ಒತ್ತಾಯಿಸಿ ಅತ್ಯಾಚಾರ ಎಸಗಿದ್ದಾನೆ ಎಂದು ಎಫ್‌ಐಆರ್‌ನಲ್ಲಿ ಆರೋಪಿಸಲಾಗಿದೆ.
ಕಾನ್‌ಸ್ಟೆಬಲ್ ಸಂತ್ರಸ್ತೆಗೆ ಬೆದರಿಕೆ ಹಾಕಿದ್ದು, ಆಕೆಯ ಖಾಸಗಿ ವಿಡಿಯೋಗಳು ತನ್ನ ಬಳಿ ಇವೆ ಮತ್ತು ಘಟನೆಯ ಬಗ್ಗೆ ಯಾರಿಗಾದರೂ ಹೇಳಿದರೆ ಅವುಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಬಿಡುಗಡೆ ಮಾಡುತ್ತೇನೆ ಎಂದು ಹೇಳಿದ್ದಾನೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.
ಸಂತ್ರಸ್ತೆ ತಾಯಿ ನೀಡಿದ ದೂರಿನ ಆಧಾರದ ಮೇಲೆ ಮೈಕೋ ಲೇಔಟ್ ಪೊಲೀಸರು ಇಬ್ಬರ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿ, ಆರೋಪಿಗಳನ್ನು ಬಂಧಿಸಿದ್ದಾರೆ.















