ನ್ಯಾಯಾಲಯಕ್ಕೆ ಸಲ್ಲಿಸಿದ್ದ ಅರ್ಜಿಯಲ್ಲಿ ಅತ್ಯಾಚಾರ ಸಂತ್ರಸ್ತೆಯ ಹೆಸರು ಬಹಿರಂಗಪಡಿಸಿದ್ದ ಮುಂಬೈ ಮೂಲದ ಕಾನೂನು ಸಂಸ್ಥೆ ಹುಳ್ಯಾಲ್ಕರ್ ಅಂಡ್ ಅಸೋಸಿಯೇಟ್ಸ್’ಗೆ ಬಾಂಬೆ ಹೈಕೋರ್ಟ್ ಇತ್ತೀಚೆಗೆ ₹ 5,000 ದಂಡ ವಿಧಿಸಿದೆ.
ಬಳಿಕ ಕಾನೂನು ಸಂಸ್ಥೆಯ ಸೂಚನೆಯಂತೆ ಅರ್ಜಿದಾರರ ಪರ ವಕೀಲ ಝೈದ್ ಅನ್ವರ್ ಖುರೇಷಿ ಅವರು ಅರ್ಜಿದಾರೆ ಸಂತ್ರಸ್ತೆಯ ಹೆಸರು ಮಸುಕಾಗಿಸಲು ನ್ಯಾಯಾಲಯದ ಅನುಮತಿ ಕೋರಿದರು.
ಇದಕ್ಕೆ ನ್ಯಾಯಮೂರ್ತಿಗಳಾದ ರೇವತಿ ಮೋಹಿತೆ ಡೆರೆ ಮತ್ತು ಪೃಥ್ವಿರಾಜ್ ಕೆ ಚವಾಣ್ ಅವರಿದ್ದ ವಿಭಾಗೀಯ ಪೀಠ ಅನುಮತಿ ನೀಡಿತಾದರೂ ಐಪಿಸಿ ಸೆಕ್ಷನ್ 228ಎ ಸೂಚನೆಯ ಹೊರತಾಗಿಯೂ, ವಕೀಲರು ಅತ್ಯಾಚಾರ ಸಂತ್ರಸ್ತರ ಗುರುತು ಬಹಿರಂಗಪಡಿಸಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿತು.
“ಅತ್ಯಾಚಾರ ಸಂತ್ರಸ್ತರ ಹೆಸರು ಬಹಿರಂಗಪಡಿಸುವುದು ಎರಡು ವರ್ಷ ಶಿಕ್ಷೆ ವಿಧಿಸಬಹುದಾದ ಅಪರಾಧ ಎಂದು ಐಪಿಸಿ ಸೆಕ್ಷನ್ 228 ಎಯಲ್ಲಿ ಹೇಳಿದ್ದರೂ ಮತ್ತು ವಕೀಲರಿಗೆ ಪದೇಪದೇ ಸಲಹೆ ನೀಡಿದ್ದರೂ ಮೇಲೆ ತಿಳಿಸಿದ ಅರ್ಜಿಯಲ್ಲಿ ಸಂತ್ರಸ್ತೆಯ ಹೆಸರು ಬಹಿರಂಗಪಡಿಸಲಾಗಿದೆ” ಎಂದು ಅದು ಹೇಳಿತು.
ಹೀಗಾಗಿ ಎರಡು ವಾರಗಳೊಳಗೆ ₹ 5,000 ದಂಡದ ಮೊತ್ತವನ್ನು ಕೀರ್ತಿಕಾರ್ ಕಾನೂನು ಗ್ರಂಥಾಲಯದಲ್ಲಿ ಠೇವಣಿ ಇಡುವಂತೆ ಕಾನೂನು ಸಂಸ್ಥೆಗೆ ನ್ಯಾಯಾಲಯ ಸೂಚಿಸಿತು.