ಮೈಸೂರು: ರಾಜಕೀಯ ವಲಯದಲ್ಲಿ ಹೊಸದೊಂದು ಬೆಳವಣಿಗೆ ತರುವ ಉದ್ದೇಶದಿಂದ ರಾಷ್ಟ್ರೀಯ ಆರಕ್ಷಕ್ ಮಂಚ್ ಎಂಬ ಹೊಸ ಪಕ್ಷ ಸ್ಥಾಪಿಸಲಾಗಿದೆ ಎಂದು ಸಂಸ್ಥಾಪಕ ಅಧ್ಯಕ್ಷ ಗೋಪಾಲಕೃಷ್ಣ ನಾಯಕ್ ತಿಳಿಸಿದರು.
ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇತರೆ ಪಕ್ಷಗಳನ್ನು ತಮ್ಮ ಪಕ್ಷ ನಕಲು ಮಾಡುವುದಿಲ್ಲ. ಆದರೆ ನಿರುದ್ಯೋಗ ಹಾಗೂ ಭ್ರಷ್ಟಾಚಾರ ನಿವಾರಣೆ, ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಯ್ದುಕೊಳ್ಳಲು ಗಮನ ನೀಡಲಿದೆ. ಇದಕ್ಕಾಗಿ ಪ್ರಣಾಳಿಕೆ ಸಿದ್ಧಪಡಿಸುತ್ತಿದ್ದು, ರಾಜ್ಯದ ಎಲ್ಲ ಕ್ಷೇತ್ರಗಳಿಂದಲೂ ಪಕ್ಷದ ಅಭ್ಯರ್ಥಿಗಳು ಕಣಕ್ಕಿಳಿಯಲಿದ್ದಾರೆಂದರು.
ಅಲ್ಲದೆ, ಕೂಲಿ ಕಾರ್ಮಿಕರಿಗೆ ಭವಿಷ್ಯ ನಿಧಿ ಸ್ಥಾಪನೆ ಪಕ್ಷದ ಪ್ರಮುಖ ಉದ್ದೇಶವಾಗಿದೆ. ಜೊತೆಗೆ ರಾಜ್ಯದಲ್ಲಿ ನಿರುದ್ಯೋಗ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹೀಗಾಗಿ ಉದ್ಯೋಗ ಇಲ್ಲದ ಕುಟುಂಬಗಳಿಗೆ ಕುಟುಂಬವೊಂದಕ್ಕೆ ಒಂದು ಉದ್ಯೋಗ ನೀಡಲು ಶ್ರಮಿಸಲಾಗುವುದು.
ಸಾರ್ವಜನಿಕರ ಎಲ್ಲ ಸಮಸ್ಯೆಗಳ ಪರಿಹಾರಕ್ಕೆ ಏಕ ಗವಾಕ್ಷಿ ಆರಂಭಿಸಲಾಗುವುದು. ಇದರಿಂದಾಗಿ ಸಮಯ ಉಳಿಯಲಿದೆ ಮತ್ತು ಲಂಚ ನೀಡುವುದು ತಪ್ಪಲಿದೆ. ಇದೇ ರೀತಿಯ ಹಲವಾರು ಯೋಜನೆಗಳು ಪಕ್ಷದ ಮುಂದಿವೆ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಟಿಯಲ್ಲಿ ಇನ್ನಿತರ ಪದಾಧಿಕಾರಿಗಳಾದ ಡಾ. ಹರೀಶ್, ಸಿ.ಪಿ. ಗಿರೀಶ್, ಬಿ. ಶ್ರೀಕಂಠಪ್ಪ,, ರವಿ ಅರಸ್, ಅಶ್ವಿನ್, ಮಂಜುನಾಥ್ ಹಾಜರಿದ್ದರು.