ಮಂಡ್ಯ: ಸಾರ್ವಜನಿಕ ರಸ್ತೆ ಬಂದ್ ಮಾಡಿರುವುದನ್ನು ತೆರವು ಗೊಳಿಸಲು ಆಗ್ರಹಿಸಿ ಮಂಡ್ಯ ತಾಲ್ಲೂಕಿನ ರಾಯಶೆಟ್ಟಿಪುರ ಗ್ರಾಮಸ್ಥರು ಡಿಸಿ ಕಚೇರಿ ಬಳಿ ಪ್ರತಿಭಟನೆ ನಡೆಸಿದರು.
ಗ್ರಾಮದ ಸಾರ್ವಜನಿಕ ರಸ್ತೆ ಬಂದ್ ಮಾಡಿಸಿರುವ ಬಗ್ಗೆ ಮಂಡ್ಯ ಶಾಸಕ ಗಣಿಗ ರವಿಕುಮಾರ್ ವಿರುದ್ಧ ಗಂಭೀರ ಆರೋಪ ಕೇಳಿಬಂದಿದ್ದು, ಶಾಸಕರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಸರ್ ಎಂ.ವಿಶ್ವೇಶ್ವರಯ್ಯ ಪ್ರತಿಮೆ ಬಳಿಯಿಂದ ಮೆರವಣಿಗೆ ಹೊರಟು ಜಿಲ್ಲಾಧಿಕಾರಿ ಕಚೇರಿಗೆ ತೆರಳಿದ ಗ್ರಾಮಸ್ಥರು ತಲೆಯ ಮೇಲೆ ಕಬ್ಬು, ಸೌದೆ ಹೊತ್ತು ಪ್ರತಿಭಟನೆ ನಡೆಸಿದರು.
ರೈತರ ಕೃಷಿ ಉತ್ಪನ್ನ ಕೆಲಸಕ್ಕೆ ಅಡ್ಡಿಪಡಿಸದ ರೀತಿ ಕ್ರಮ ವಹಿಸಬೇಕು. ಕೆಲವರ ಜೊತೆ ಶಾಸಕರು ಜೊತೆ ಗೂಡಿ ಅಡ್ಡಿಪಡಿಸುವ ಕೆಲಸ ಮಾಡ್ತಿದ್ದಾರೆ. ಶಾಸಕರಿಂದ ಅಧಿಕಾರಿಗಳ ಕೈ ಕಟ್ಟಿಹಾಕುವ ಹುನ್ನಾರ ನಡೆಯುತ್ತಿದೆ. ರಾಜಕೀಯ ಒತ್ತಡಕ್ಕೆ ಒಳಗಾಗದೆ ಜಿಲ್ಲಾಧಿಕಾರಿ ಕ್ರಮವಹಿಸಬೇಕು. ಬಂಡಿದಾರಿ ರಸ್ತೆ ಬಿಡಿಸುವ ಕೆಲಸವನ್ನು ಮಾಡಬೇಕು. ಕೂಡಲೇ ರೈತರಿಗೆ ತೊಂದರೆ ಕೊಡುವ ಕೆಲಸವನ್ನು ತಡೆಯಬೇಕು. ವಿಜಿಯಮ್ಮ ಎಂಬ ರೈತ ಮಹಿಳೆಯ ಕಬ್ಬು ಒಣಗುತ್ತಿದೆ ತಕ್ಷಣವೇ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ದಲಿತ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷ ವೆಂಕಟಗಿರಿಯಯ್ಯ ಸೇರಿ ಗ್ರಾಮಸ್ಥರು ಭಾಗಿಯಾಗಿದ್ದರು.