ಮನೆ ರಾಜ್ಯ ಆರ್‌ಸಿಬಿ ಸಂಭ್ರಮಾಚರಣೆ ಕಾಲ್ತುಳಿತ ದುರಂತ: ಸರ್ಕಾರದ ನಿರ್ಲಕ್ಷ್ಯವೇ ಕಾರಣ: ಸ್ನೇಹಮಯಿ ಕೃಷ್ಣ

ಆರ್‌ಸಿಬಿ ಸಂಭ್ರಮಾಚರಣೆ ಕಾಲ್ತುಳಿತ ದುರಂತ: ಸರ್ಕಾರದ ನಿರ್ಲಕ್ಷ್ಯವೇ ಕಾರಣ: ಸ್ನೇಹಮಯಿ ಕೃಷ್ಣ

0

ಬೆಂಗಳೂರು: ಆರ್‌ಸಿಬಿ ಸಂಭ್ರಮಾಚರಣೆಯಲ್ಲಿ ಪಾಲ್ಗೊಳ್ಳಲು ಹೋಗಿದ್ದ ಸಾವಿರಾರು ಅಭಿಮಾನಿಗಳ ಮಧ್ಯೆ ಭೀಕರ ಕಾಲ್ತುಳಿತ ಸಂಭವಿಸಿದೆ. ಘಟನೆಯಲ್ಲಿ 11 ಮಂದಿ ಸಾವನ್ನಪ್ಪಿದ್ದಾರೆ. ಈಗ ಈ ಘಟನೆ ಕಾನೂನು ಯುದ್ಧದ ರೂಪ ಪಡೆದುಕೊಳ್ಳುತ್ತಿದೆ. ಈ ಸಂಬಂಧ ಈಗಾಗಲೇ ಸರ್ಕಾರ ಮತ್ತು ಕ್ರೀಡಾ ಸಂಸ್ಥೆಗಳ ವಿರುದ್ಧ ಆರೋಪಗಳ ಸುರಿಮಳೆ ಆರಂಭವಾಗಿದೆ.

ಸ್ನೇಹಮಯಿ ಕೃಷ್ಣ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಹಾಗೂ ಕರ್ನಾಟಕ ಕ್ರಿಕೆಟ್ ಸಂಸ್ಥೆ (ಕೆಎಸ್​​​ಸಿಎ) ಅಧಿಕಾರಿಗಳ ವಿರುದ್ಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ಅವರು ನೀಡಿದ ದೂರಿನಲ್ಲಿ, “ರಾಜಕೀಯ ಲಾಭಕ್ಕಾಗಿ ಯಾವುದೇ ಮುನ್ನೆಚ್ಚರಿಕೆ ಇಲ್ಲದೆ ಈ ದೊಡ್ಡ ಮಟ್ಟದ ಸಮಾರಂಭವನ್ನು ಆಯೋಜಿಸಿದ್ದು, ಸಾರ್ವಜನಿಕರ ಜೀವಕ್ಕೆ ಅಪಾಯ ಉಂಟಾಗಿದೆ. ಇದರಿಂದಾಗಿ 11 ಜನರು ಪ್ರಾಣ ಕಳೆದುಕೊಂಡಿದ್ದಾರೆ” ಎಂದು ಆರೋಪಿಸಿದ್ದಾರೆ.

ವಿಜಯೋತ್ಸವದ ವೇಳೆ ಜನಸಂದಣಿ ನಿಯಂತ್ರಣದಲ್ಲಿ ಭದ್ರತಾ ವ್ಯವಸ್ಥೆ ಸಂಪೂರ್ಣ ವಿಫಲವಾದುದು, ಮತ್ತು ಕಾರ್ಯಕ್ರಮ ನಿರ್ವಹಣೆಯಲ್ಲಿ ಸ್ಪಷ್ಟವಾದ ನಿರ್ಲಕ್ಷ್ಯ ಕಂಡುಬಂದಿದ್ದು, ಇದಕ್ಕೆ ರಾಜ್ಯದ ಉನ್ನತ ಮಟ್ಟದ ರಾಜಕೀಯ ನಾಯಕರು ಹಾಗೂ ಕ್ರಿಕೆಟ್ ಮಂಡಳಿಯ ಅಧಿಕಾರಿಗಳು ನೇರ ಹೊಣೆಗಾರರಾಗಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಹಿನ್ನೆಲೆಯಲ್ಲಿ ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ 106ರಡಿ ಪ್ರಕರಣ ದಾಖಲಿಸಿ, ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಮನವಿ ಮಾಡಿದ್ದಾರೆ.

ಇದೇ ಸಂಬಂಧ ವಕೀಲ ನಟರಾಜ ಶರ್ಮ ಇಂದು ಮಧ್ಯಾಹ್ನ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ನೀಡಲು ಮುಂದಾಗಿರುವ ಮಾಹಿತಿ ಲಭ್ಯವಾಗಿದೆ. ಇದರಿಂದಾಗಿ ಸರ್ಕಾರದ ಮೇಲೆ ಒತ್ತಡ ಹೆಚ್ಚಾಗುವ ನಿರೀಕ್ಷೆಯಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಗೃಹ ಸಚಿವ ಡಾ. ಜಿ. ಪರಮೇಶ್ವರ್, “ಈ ಘಟನೆ ರಾಜ್ಯದ ಇತಿಹಾಸದಲ್ಲೇ ಅಪರೂಪ. ನ್ಯಾಯಾಂಗ ತನಿಖೆಗೆ ಈಗಾಗಲೇ ಸರ್ಕಾರ ಆದೇಶ ನೀಡಿದೆ” ಎಂದು ತಿಳಿಸಿದರು.

ಒಟ್ಟಿನಲ್ಲಿ, ಐಪಿಎಲ್ ಗೆಲುವಿನ ಸಂಭ್ರಮ ದುಃಖದ ದಿನವಾಗಿ ಮಾರ್ಪಟ್ಟಿರುವುದು ದುರಂತ. ಕೇವಲ ಜನಜೀವನವಲ್ಲದೆ, ರಾಜಕೀಯ ಮತ್ತು ಕಾನೂನು ಕ್ಷೇತ್ರಗಳಲ್ಲಿಯೂ ತೀವ್ರ ಚರ್ಚೆಗೆ ಕಾರಣವಾಗಿದೆ. ಮುಂದಿನ ದಿನಗಳಲ್ಲಿ ತನಿಖೆ ಮತ್ತು ಕಾನೂನು ಕ್ರಮಗಳು ಯಾವ ರೂಪ ಪಡೆಯುತ್ತವೆ ಎಂಬುದು ಕುತೂಹಲದ ವಿಷಯವಾಗಿದೆ.