ಬೆಂಗಳೂರು: ಐಪಿಎಲ್ 2025 ಗೆಲುವಿನ ಸಂಭ್ರಮದಲ್ಲಿ ಮಿಂದೆದ್ದ ಬೆಂಗಳೂರು ನಗರದಲ್ಲಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡದ ವಿಜಯೋತ್ಸವದ ಸಂದರ್ಭದಲ್ಲಿ ನಡೆದ ಭೀಕರ ಕಾಲ್ತುಳಿತದ ದುರಂತವು ರಾಜ್ಯವನ್ನೇ ಬೆಚ್ಚಿಬೀಳಿಸಿದೆ. ಈ ದುರಂತದಲ್ಲಿ ಮೃತಪಟ್ಟವರ ನಿಖರ ಸಂಖ್ಯೆ ಇನ್ನೂ ತಿಳಿದು ಬಂದಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಪತ್ರಕರ್ತರೊಂದಿಗೆ ಮಾತನಾಡಿದ ಡಿ.ಕೆ. ಶಿವಕುಮಾರ್, “ಸಂಭ್ರಮಾಚರಣೆ ವೇಳೆ ಕಾಲ್ತುಳಿತ ಸಂಭವಿಸಿದೆ. ಅಲ್ಲಿ ನಿಖರವಾಗಿ ಎಷ್ಟು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂಬುದನ್ನು ಈಗಲೇ ಹೇಳಲು ಸಾಧ್ಯವಿಲ್ಲ” ಎಂದು ತಿಳಿಸಿದ್ದಾರೆ. ಪೊಲೀಸರು ಶಕ್ತಿ ಮೀರಿ ಪರಿಸ್ಥಿತಿಯನ್ನು ನಿಭಾಯಿಸಲು ಪ್ರಯತ್ನಿಸಿದ್ದಾರೆ. ನಾನು ಈಗ ಆಸ್ಪತ್ರೆಗಳಿಗೆ ಭೇಟಿ ನೀಡಲಿದ್ದೇನೆ. ಆದರೆ ರೋಗಿಗಳನ್ನು ನೋಡುತ್ತಿರುವ ವೈದ್ಯರಿಗೆ ತೊಂದರೆ ನೀಡಲು ನಾನು ಬಯಸುವುದಿಲ್ಲ ಎಂದರು.
ಈ ನಡುವೆ ಹಲವಾರು ಸ್ಥಳೀಯರು ಮತ್ತು ಸಾಮಾಜಿಕ ಜಾಲತಾಣ ಬಳಕೆದಾರರು ಪೋಲೀಸರು ಸಾರ್ವಜನಿಕರನ್ನು ನಿಯಂತ್ರಿಸಲು ಸೂಕ್ತ ತಯಾರಿ ಮಾಡಿರಲಿಲ್ಲವೆಂದು ಆರೋಪಿಸುತ್ತಿದ್ದಾರೆ. ಕೆಲವೆಡೆ ಲಾಠಿಚಾರ್ಜ್ ನಡೆಸಿದ ದೃಶ್ಯಗಳು ವೈರಲ್ ಆಗಿದ್ದು, ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಡಿಸಿಎಂ ಹೇಳಿಕೆಯಲ್ಲಿ, “ಸ್ಥಿತಿಗತಿಯ ಗಂಭೀರತೆಯನ್ನು ಮನಗಂಡು, ಕಾರ್ಯಕ್ರಮವನ್ನು ಕೇವಲ 10 ನಿಮಿಷಗಳೊಳಗೆ ಮುಕ್ತಾಯಗೊಳಿಸಲಾಗಿದೆ. ಜನರ ಭದ್ರತೆ ನಮ್ಮ ಮೊದಲ ಆದ್ಯತೆ” ಎಂದು ಸ್ಪಷ್ಟಪಡಿಸಿದರು.
“ಇದೊಂದು ನೋವಿನ ಘಟನೆ. ನಮ್ಮ ಸರ್ಕಾರ ಎಲ್ಲ ರೀತಿಯಿಂದಾಗಿ ಪರಿಸ್ಥಿತಿಯನ್ನು ನಿಭಾಯಿಸಲು ಪ್ರಯತ್ನಿಸುತ್ತಿದೆ. ಜನರು ಶಾಂತವಾಗಿರಬೇಕು ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.















