ಮನೆ ಕ್ರೀಡೆ 2ನೇ ಕಪ್ ಮೇಲೆ ಆರ್‌ಸಿಬಿ ಕಣ್ಣು – ಹ್ಯಾಟ್ರಿಕ್‌ ನಿರೀಕ್ಷೆಯಲ್ಲಿ ಬೆಂಗಳೂರು..?!

2ನೇ ಕಪ್ ಮೇಲೆ ಆರ್‌ಸಿಬಿ ಕಣ್ಣು – ಹ್ಯಾಟ್ರಿಕ್‌ ನಿರೀಕ್ಷೆಯಲ್ಲಿ ಬೆಂಗಳೂರು..?!

0

ವಡೋದರಾ : 4ನೇ ಆವೃತ್ತಿಯ ವುಮೆನ್‌ ಪ್ರೀಮಿಯರ್‌ ಲೀಗ್‌ನ ಫೈನಲ್‌ ಪಂದ್ಯಕ್ಕೆ ವೇದಿಕೆ ಸಜ್ಜಾಗಿದೆ. ಮಾಜಿ ಚಾಂಪಿಯನ್ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಹಾಗೂ ಕಳೆದ 3 ಆವೃತ್ತಿಗಳ ರನ್ನರ್-ಅಪ್ ಡೆಲ್ಲಿ ಕ್ಯಾಪಿಟಲ್ಸ್ ಪ್ರಶಸ್ತಿಗಾಗಿ ಸೆಣಸಾಡಲಿವೆ. ಲೀಗ್‌ ಹಂತ 8 ಪಂದ್ಯಗಳ ಪೈಕಿ 6 ರಲ್ಲಿ ಗೆದ್ದಿರುವ ಆರ್‌ಸಿಬಿ ನೇರವಾಗಿ ಫೈನಲ್‌ ಪ್ರವೇಶಿಸಿದರೆ ಡೆಲ್ಲಿ ಲೀಗ್‌ನಲ್ಲಿ 4 ಪಂದ್ಯ ಗೆದ್ದು ಎಲಿಮಿನೇಟರ್‌ ಪಂದ್ಯದಲ್ಲಿ ಗುಜರಾತ್‌ ತಂಡವನ್ನು ಸೋಲಿಸಿ ಪ್ರಶಸ್ತಿ ಸುತ್ತು ತಲುಪಿದೆ.

ಹಾಗೆ ನೋಡಿದರೆ ಆರ್‌ಸಿಬಿ ಈ ಟೂರ್ನಿಯಲ್ಲಿ ಸಂಘಟಿತ ಪ್ರದರ್ಶನ ನೀಡುತ್ತಿದೆ. ನಾಯಕಿ ಸ್ಮೃತಿ ಮಂಧನಾ, ಗ್ರೇಸ್ ಹ್ಯಾರಿಸ್, ರಿಚಾ ಘೋಷ್ ವಿಫಲರಾದರೂ ಇತರರು ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಬೌಲಿಂಗ್‌ನಲ್ಲಿ ನ್ಯಾಡಿನ್ ಡೆ ಕ್ಲರ್ಕ್, ಸಯಾಲಿ ಸತ್ತಾರೆ, ಲಾರೆನ್ ಬೆಲ್ ಜೊತೆಗೆ ಕನ್ನಡತಿ ಶ್ರೇಯಾಂಕ ಪಾಟೀಲ್ ಕೂಡಾ ನಿರ್ಣಾಯಕ ಪಂದ್ಯಗಳಲ್ಲಿ ತಂಡಕ್ಕೆ ನೆರವಾಗಿದ್ದಾರೆ.

ಡೆಲ್ಲಿ ತಂಡ ಆರಂಭದಲ್ಲಿ ಕಳಪೆ ಪ್ರದರ್ಶನ ನೀಡಿತ್ತು. ಆದರೆ ನಂತರ ಉತ್ತಮ ಪ್ರದರ್ಶನ ನೀಡಿ ಫೈನಲ್‌ ಪ್ರವೇಶಿಸಿದೆ. ಎಲಿಮಿನೇಟರ್‌ನಲ್ಲಿ ಲಿಜೆಲ್ ಲೀ, ಶಫಾಲಿ ವರ್ಮಾ, ಲಾರಾ ವೋಲ್ವಾರ್ಡ್, ನಾಯಕಿ ಜೆಮಿಮಾ ರೊಡ್ರಿಗಸ್ ಉತ್ತಮವಾಗಿ ಆಡಿದ್ದರು. ಮರಿಜಾನ್ನೆ ಕಪ್‌ ಉತ್ತಮವಾಗಿ ಬ್ಯಾಟ್‌ ಬೀಸಬಲ್ಲರು.

ಡೆಲ್ಲಿ ಪರ ಲಿಜೆಲ್ ಲೀ 9 ಪಂದ್ಯಗಳಿಂದ 283 ರನ್‌ ಬಾರಿಸಿದ್ದರೆ, ನಂದಿನಿ ಶರ್ಮಾ 16 ವಿಕೆಟ್‌, ಶ್ರೀ ಚರಣಿ 14 ವಿಕೆಟ್‌ ಗಳಿಸಿದ್ದಾರೆ. ಆರ್‌ಸಿಬಿ ಪರ ನಾಯಕಿ ಸ್ಮೃತಿ ಮಂದನಾ 8 ಪಂದ್ಯಗಳಿಂದ 290 ರನ್‌ ಹೊಡೆದಿದ್ದರೆ ನ್ಯಾಡಿನ್ ಡೆ ಕ್ಲರ್ಕ್ 15 ವಿಕೆಟ್‌, ಲಾರೆನ್ ಬೆಲ್ 12 ವಿಕೆಟ್‌ ಪಡೆದಿದ್ದಾರೆ. ಆರ್‌ಸಿಬಿ ಫ್ರಾಂಚೈಸಿ ಹ್ಯಾಟ್ರಿಕ್ ಟ್ರೋಫಿ ಗೆಲುವಿನ ನಿರೀಕ್ಷೆಯಲ್ಲಿದೆ. 2024ರಲ್ಲಿ ಮಹಿಳಾ ತಂಡ, 2025ರಲ್ಲಿ ಪುರುಷರ ತಂಡ ಚಾಂಪಿಯನ್ ಆಗಿತ್ತು. ಈ ವರ್ಷ ಮತ್ತೆ ಕಪ್ ಗೆಲ್ಲುತ್ತಾ ಎಂಬ ಪ್ರಶ್ನೆಗೆ ಇಂದು ರಾತ್ರಿ ಉತ್ತರ ಸಿಗಲಿದೆ.