ಕೋಲ್ಕತಾ: ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕೋಲ್ಕತಾ ನೈಟ್ ರೈಡರ್ಸ್ ತಂಡಗಳು ಗುರುವಾರ ಇಲ್ಲಿನ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆಯುವ 2023ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯ 9ನೇ ಪಂದ್ಯದಲ್ಲಿ ಸೆಣಸಲಿವೆ.
ಈ ಪಂದ್ಯಕ್ಕಾಗಿ ಉಭಯ ತಂಡಗಳು ಕಠಿಣ ತಾಲೀಮು ನಡೆಸುತ್ತಿವೆ.
ಭಾನುವಾರ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿದ್ದ ತನ್ನ ಮೊದಲನೇ ಪಂದ್ಯದಲ್ಲಿ ಆರ್ ಸಿಬಿ ತವರು ಅಭಿಮಾನಿಗಳ ಎದುರು ಅದ್ಭುತ ಪ್ರದರ್ಶನವನ್ನು ತೋರಿತ್ತು. ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗಗಳಲ್ಲಿ ಸಂಘಟಿತ ಪ್ರದರ್ಶನ ತೋರಿ 8 ವಿಕೆಟ್ ಗಳ ಭರ್ಜರಿ ಗೆಲುವು ಪಡೆಯುವ ಮೂಲಕ ಹದಿನಾರನೇ ಆವೃತ್ತಿಯ ಟೂರ್ನಿಯಲ್ಲಿ ಶುಭಾರಂಭ ಕಂಡಿತ್ತು.
ಬೌಲಿಂಗ್ ನಲ್ಲಿ ಕರಣ್ ಶರ್ಮಾ 3 ವಿಕೆಟ್ ಪಡೆದು ಮಿಂಚಿದ್ದರೆ, ಬ್ಯಾಟಿಂಗ್ ನಲ್ಲಿ ವಿರಾಟ್ ಕೊಹ್ಲಿ ಹಾಗೂ ಫಾಫ್ ಡು ಪ್ಲೆಸಿಸ್ ಅರ್ಧಶತಕಗಳನ್ನು ಸಿಡಿಸುವ ಮೂಲಕ ಆರ್ ಸಿಬಿ ತಂಡಕ್ಕೆ ಭರ್ಜರಿ ಗೆಲುವು ತಂದುಕೊಟ್ಟಿದ್ದರು. ಇದೀಗ ಲಯವನ್ನು ಕೋಲ್ಕತಾದಲ್ಲಿ ಮುಂದುವರಿಸಲು ಬೆಂಗಳೂರು ತಂಡ ಎದುರು ನೋಡುತ್ತಿದೆ.
ಇನ್ನು ಶ್ರೇಯಸ್ ಅಯ್ಯರ್ ಅನುಪಸ್ಥಿತಿಯಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡ ತನ್ನ ಮೊದಲನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಎದುರು 7 ರನ್ ಗಳಿಂದ ಸೋಲು ಅನುಭವಿಸಿತ್ತು. ಕೊನೆಯಲ್ಲಿ 4 ಓವರ್ ಬಾಕಿ ಇರುವಾಗ ಮಳೆ ಬಂದಿದ್ದರಿಂದ ಡಿಎಲ್’ಎಸ್ ನಿಯಮದ ಅನ್ವಯ ಪಂಜಾಬ್ ಗೆ ಗೆಲುವು ಘೋಷಿಸಲಾಗಿತ್ತು. ಆದರೆ, ಗುರುವಾರ ತವರು ಮೈದಾನದಲ್ಲಿ ಆರ್ ಸಿಬಿ ವಿರುದ್ಧ ಗೆಲುವು ಪಡೆಯಲು ನಿತೀಶ್ ರಾಣಾ ನಾಯಕತ್ವದ ಕೆಕೆಆರ್ ಎದುರು ನೋಡುತ್ತಿದೆ.
ಆರ್ ಸಿಬಿ ಪ್ಲೇಯಿಂಗ್ XIನಲ್ಲಿ ಒಂದು ಬದಲಾವಣೆ ನಿರೀಕ್ಷೆ
2022ರ ಐಪಿಎಲ್ ಟೂರ್ನಿಯಲ್ಲಿ ಆರ್ ಸಿಬಿ ಪರ ಹಲವು ಮ್ಯಾಚ್ ವಿನ್ನಿಂಗ್ ಇನಿಂಗ್ಸ್ ಗಳನ್ನು ಆಡಿದ್ದ ರಜತ್ ಪಾಟಿದಾರ್ ಗಾಯದಿಂದಾಗಿ ಐಪಿಎಲ್ ಟೂರ್ನಿಯಿಂದ ಹೊರ ಬಿದ್ದಿದ್ದಾರೆ. ಮತ್ತೊಂದೆಡೆ, ಮೊದಲನೇ ಪಂದ್ಯದಲ್ಲಿ ಗಾಯಕ್ಕೆ ತುತ್ತಾಗಿದ್ದ ರೀಸ್ ಟಾಪ್ಲೀ ಎರಡನೇ ಪಂದ್ಯಕ್ಕೆ ಲಭ್ಯರಾಗುವ ಬಗ್ಗೆ ಇನ್ನು ಮಾಹಿತಿ ಇಲ್ಲ. ಜಾಶ್ ಹೆಝಲ್ವುಡ್ ಆಡುವ ಬಗ್ಗೆಯೂ ಅಧಿಕೃತವಾಗಿ ಮಾಹಿತಿ ಇಲ್ಲ. ಅಂದಹಾಗೆ ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಆರ್ಸಿಬಿಯಲ್ಲಿ ಒಂದು ಬದಲಾವಣೆ ನಿರೀಕ್ಷಿಸಬಹುದು.
ಮುಖಾಮುಖಿ ದಾಖಲೆ
ಒಟ್ಟು ಆಡಿರುವ ಪಂದ್ಯಗಳು: 30
ಆರ್ಸಿಬಿ ಗೆಲುವು:14
ಕೆಕೆಆರ್ ಗೆಲುವು: 16
ಆರ್ ಸಿಬಿ ಸಂಭಾವ್ಯ ಪ್ಲೇಯಿಂಗ್ XI: ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್ (ನಾಯಕ), ಗ್ಲೆನ್ ಮ್ಯಾಕ್ಸ್ವೆಲ್, ಮೈಕಲ್ ಬ್ರೇಸ್ವೆಲ್, ದಿನೇಶ್ ಕಾರ್ತಿಕ್(ವಿ.ಕೀ), ಶಹಬಾಝ್ ಅಹ್ಮದ್, ಡೇವಿಡ್ ವಿಲ್ಲೀ/ರೀಸ್ ಟಾಪ್ಲೀ, ಕರಣ್ ಶರ್ಮಾ, ಹರ್ಷಲ್ ಪಟೇಲ್, ಆಕಾಶ್ ದೀಪ್, ಮೊಹಮ್ಮದ್ ಸಿರಾಜ್
ಕೆಕೆಆರ್ ಸಂಭಾವ್ಯ ಪ್ಲೇಯಿಂಗ್ XI: ರಹಮಾನುಲ್ಲಾ ಗುರ್ಬಾಜ್ (ವಿ.ಕೀ), ಮಂದೀಪ್ ಸಿಂಗ್, ನಿತೀಶ್ ರಾಣಾ (ನಾಯಕ), ರಿಂಕು ಸಿಂಗ್, ಆಂಡ್ರೆ ರಸೆಲ್, ಶಾರ್ದುಲ್ ಠಾಕೂರ್, ಸುನೀಲ್ ನರೇನ್, ಟಿಮ್ ಸೌಥಿ, ಅನುಕುಲ್ ರಾಯ್, ಉಮೇಶ್ ಯಾದವ್, ವರುಣ್ ಚಕ್ರವರ್ತಿ