ಬೆಂಗಳೂರು: ಐಪಿಎಲ್ ಫೈನಲ್ ಪಂದ್ಯಕ್ಕೂ ಮೊದಲು ವಿಜಯೋತ್ಸವಕ್ಕಾಗಿ ಆರ್‌ಸಿಬಿ ಆಡಳಿತ ಮಂಡಳಿಯಿಂದ ನಗರದ ಪೊಲೀಸರಿಗೆ ಸಲ್ಲಿಸಲಾದ ಅರ್ಜಿ ಕುರಿತು ತೀವ್ರ ಅಚ್ಚರಿ ವ್ಯಕ್ತಪಡಿಸಿರುವ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು, “ಪಂದ್ಯ ಆರಂಭಕ್ಕೂ ಮುನ್ನ ವಿಜಯೋತ್ಸವ ಯಾಕೆ? ಗೆಲ್ಲುವುದು ಆಗಲೇ ಗೊತ್ತಿತ್ತು ಅನ್ಸುತ್ತಾ?” ಎಂಬ ಗಂಭೀರ ಪ್ರಶ್ನೆ ಎತ್ತಿದ್ದಾರೆ.
ಅಹ್ಮದಾಬಾದ್‌ನಲ್ಲಿ ಫೈನಲ್ ಪಂದ್ಯ ಸಂಜೆ 7.30ಕ್ಕೆ ಆರಂಭವಾಗಿತ್ತು. ಆದರೆ ಬೆಂಗಳೂರು ನಗರದಲ್ಲಿ ಸಂಜೆ 6 ಗಂಟೆಗೆಲೇ ವಿಜಯೋತ್ಸವಕ್ಕೆ ಅನುಮತಿ ನೀಡುವಂತೆ ಪೊಲೀಸರು ಹಾಗೂ ಸಿಬ್ಬಂದಿ ಇಲಾಖೆಗೆ ಅರ್ಜಿ ಸಲ್ಲಿಸಲಾಗಿತ್ತು. “ಪಂದ್ಯ ಆರಂಭಕ್ಕೂ ಮುನ್ನ ಗೆಲುವು ಖಚಿತ ಎಂಬ ಭರವಸೆ ಆರ್‌ಸಿಬಿಗೆ ಬಂದಿತ್ತೆಂಬ ಅನುಮಾನ ಎದುರಾಗುತ್ತದೆ” ಎಂದರು.
ಪಂದ್ಯ ಮುಗಿದ ಮರುದಿನ ಬೆಳಗ್ಗೆ 7.30ಕ್ಕೆ ಪೊಲೀಸ್ ಕಮಿಷನರ್ ಮೇಲೆ ಒತ್ತಡ ಹಾಕಿದ್ದು ಯಾರು? ಎನ್ನುವುದು ಗೊತ್ತಿದೆ. ಅದನ್ನೇ ಹೇಳಿದ್ದೇನೆ. ನಾನು ವಾಸ್ತವಾಂಶ ತಿಳಿದು ಮಾತಾಡಿದ್ದೇನೆ. ಅಸೂಯೆಯಿಂದ, ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ನಾನು ಮಾತನಾಡಿಲ್ಲ ಎಂದು ಕೇಂದ್ರ ಸಚಿವರು ಹೇಳಿದರು.
ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ಗೋವಿಂದರಾಜು ಅವರನ್ನು ತೆಗೆದು ಹಾಕಿರುವುದನ್ನು ಸ್ವಾಗತಿಸಿದ ಅವರು, ಐದು ಮಂದಿ ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಿರುವ ಕ್ರಮವನ್ನು ಖಂಡಿಸಿದರು. “ತಪ್ಪು ಮಾಡಿದವರು ರಾಜಕೀಯವಾಗಿ ಹೊಣೆ ಹೊತ್ತುಕೊಳ್ಳಬೇಕು. ಅಧಿಕಾರಿಗಳ ಮೇಲೆ ಬಲ ಹೇರುವುದು ನ್ಯಾಯವೇ?” ಎಂದು ಪ್ರಶ್ನಿಸಿದರು.
ಕಾಲ್ತುಳಿತ ದುರಂತದಲ್ಲಿ ಮೃತರಾದವರ ಬಗ್ಗೆ ಆಡಳಿತ ನೀಡಿರುವ ಪ್ರತಿಕ್ರಿಯೆ ಹಾಗೂ ಸರ್ಕಾರದ ತೀವ್ರತೆ ಕುರಿತು ಮಾತನಾಡಿದ ಕುಮಾರಸ್ವಾಮಿ, “ಹೆಣದ ಮೇಲೆ ರಾಜಕೀಯ ಮಾಡುವವರಂತಿಲ್ಲ. ಜನರ ಮುಂದೆಯೇ ಕಪ್ ಗೆ ಮುತ್ತಿಕ್ಕಿದ ದೃಶ್ಯಗಳನ್ನು ಮಾಧ್ಯಮಗಳು ತೋರಿಸಿದ್ದಿವೆ. ಜನರ ನೋವು ಹಾಗೂ ರಕ್ತದ ಮೇಲೆ ಶೋ ಮಾಡಿದ್ದು ಯಾರು?” ಎಂದು ತೀವ್ರವಾಗಿ ಟೀಕಿಸಿದರು.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭವಿಸಿದ ದುರಂತಕ್ಕೆ ನೇರವಾಗಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಗೃಹ ಸಚಿವರೇ ಹೊಣೆ ಎಂದು ಎಚ್ಚರಿಸಿದ ಅವರು, “ನೈತಿಕತೆ ಇದ್ದರೆ ರಾಜೀನಾಮೆ ಕೊಡಲಿ. ಈಗಿನ ಕಾಲದಲ್ಲಿ ನಾವು ರಾಜಕಾರಣಿಗಳು ಭಂಡರು ಅಂತ ತೋರಿಸಿಕೊಂಡಿದ್ದೇವೆ. ಅವರಿಂದ ರಾಜೀನಾಮೆ ನಿರೀಕ್ಷೆ ಮಾಡೋಕೆ ಆಗುವುದಿಲ್ಲ. ವಿರೋಧ ಪಕ್ಷವಾಗಿ ನಾವು ಒತ್ತಾಯ ಮಾಡಿದ್ದೇವೆ. ಹೆಣದ ಮೇಲೆ ರಾಜಕೀಯ ಮಾಡೋ ದುರ್ಗತಿ ನಮಗೆ ಬಂದಿಲ್ಲ. ಅದು ಬರೋದು ಇಲ್ಲ ಎಂದು ಸಚಿವರು ಆಕ್ರೋಶ ವ್ಯಕ್ತಪಡಿಸಿದರು.
ದುರಂತದಲ್ಲಿ ಮೃತಪಟ್ಟವರಿಗೆ ನೀಡಲಾದ ಪರಿಹಾರ ಮೊತ್ತ ಕಡಿಮೆ ಎಂದ ಅವರು, “ಇದು ಸರ್ಕಾರವೇ ಎಸಗಿದ ತಪ್ಪು. ಕುಟುಂಬಗಳಿಗೆ ಸರಿಯಾದ ನ್ಯಾಯವಾಗಲು ಹೆಚ್ಚು ಪರಿಹಾರ ಕೊಡಿ. ಜೀವಕ್ಕೆ ಬೆಲೆ ಕಟ್ಟಲು ಆಗದು” ಎಂದು ಹೇಳಿದರು.














