ಮನೆ ಕ್ರೀಡೆ ಆರ್‌ಸಿಬಿ ಗೆಲುವು ಕರ್ನಾಟಕಕ್ಕೆ ಹೆಮ್ಮೆ: ‘ಆರ್‌ಸಿಬಿ ತಂಡದ ಆಟಗಾರರಿಗೆ ಸನ್ಮಾನ ಮಾಡುವ ಬಗ್ಗೆ ಚರ್ಚೆ’ :...

ಆರ್‌ಸಿಬಿ ಗೆಲುವು ಕರ್ನಾಟಕಕ್ಕೆ ಹೆಮ್ಮೆ: ‘ಆರ್‌ಸಿಬಿ ತಂಡದ ಆಟಗಾರರಿಗೆ ಸನ್ಮಾನ ಮಾಡುವ ಬಗ್ಗೆ ಚರ್ಚೆ’ : ಡಿಕೆ ಶಿವಕುಮಾರ್

0

ಬೆಂಗಳೂರು: ಐಪಿಎಲ್ 2025 ಫೈನಲ್‌ನಲ್ಲಿ ಪಂಜಾಬ್ ತಂಡವನ್ನು ಮಣಿಸಿ ಐತಿಹಾಸಿಕ ಗೆಲುವು ಸಾಧಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಜಯಕ್ಕೆ ರಾಜ್ಯದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅಭಿನಂದನೆ ಸಲ್ಲಿಸಿದ್ದಾರೆ. ಈ ಜಯವು ಕೇವಲ ಕ್ರಿಕೆಟ್ ಗೆಲುವಲ್ಲ, ಕರ್ನಾಟಕದ ಹೆಮ್ಮೆಗೂ ಸೇರುತ್ತದೆ ಎಂದು ಅವರು ತಿಳಿಸಿದ್ದಾರೆ.

ಡಿಕೆ ಶಿವಕುಮಾರ್ ಮಾಧ್ಯಮದವರೊಂದಿಗೆ ಮಾತನಾಡುತ್ತಾ, “ಆರ್‌ಸಿಬಿ ತಂಡವು ಈ ಬಾರಿ ಕರ್ನಾಟಕಕ್ಕೆ ಗೌರವ, ಹೆಮ್ಮೆ ತಂದಿದ್ದಾರೆ. ಇಷ್ಟು ವರ್ಷಗಳಿಂದ ಅಭಿಮಾನಿಗಳು ಕಾಯುತ್ತಿದ್ದ ಗೆಲುವು ಈಗ ಕೈತುಂಬಿ ಸಿಕ್ಕಿದೆ. ಇಂತಹ ಮಹತ್ವದ ಜಯವನ್ನು ನಾವು ಗೌರವಿಸಲೇಬೇಕು” ಎಂದು ಹೇಳಿದರು.

ಆರ್‌ಸಿಬಿ ತಂಡಕ್ಕೆ ರಾಜ್ಯ ಸರ್ಕಾರದಿಂದ ಸನ್ಮಾನ ನೀಡುವ ಕುರಿತು ಚರ್ಚೆ ನಡೆಯುತ್ತಿದೆ. “ಯಾವ ರೀತಿಯಲ್ಲಿ ಅವರನ್ನು ಗೌರವಿಸಬೇಕು ಎಂಬುದರ ಬಗ್ಗೆ ಈಗಾಗಲೇ ಸಭೆಗಳು ನಡೆಯುತ್ತಿವೆ. ಯುವಕರು ಭರ್ಜರಿಯಾಗಿ ಈ ವಿಜಯೋತ್ಸವದಲ್ಲಿ ಭಾಗವಹಿಸುತ್ತಿದ್ದಾರೆ. ಆದರೆ ಯಾವುದೇ ಸಾರ್ವಜನಿಕ ಅಡಚಣೆ ಆಗದಂತೆ ಎಲ್ಲವನ್ನು ನಿಯಂತ್ರಿಸುವ ಹೊಣೆ ನಮ್ಮದು” ಎಂದು ಡಿಕೆಶಿ ಸ್ಪಷ್ಟಪಡಿಸಿದರು.

ಅಭಿಮಾನಿಗಳ ಭಾರೀ ಸೇರ್ಪಡೆ ನಿರೀಕ್ಷಿತವಾಗಿರುವ ಹಿನ್ನೆಲೆ, ಟ್ರಾಫಿಕ್ ನಿಯಂತ್ರಣ ಹಾಗೂ ಭದ್ರತಾ ಕ್ರಮಗಳ ಬಗ್ಗೆ ಗೃಹ ಸಚಿವರು, ಪೊಲೀಸ್ ಕಮೀಷನರ್ ಹಾಗೂ ಸಂಬಂಧಿತ ಅಧಿಕಾರಿಗಳೊಂದಿಗೆ ಚರ್ಚೆ ನಡೆಯುತ್ತಿದೆ ಎಂದು ಅವರು ಹೇಳಿದರು. “ಅವರು ಶೆಡ್ಯೂಲ್ ಹಾಕಿಕೊಳ್ಳುತ್ತಾರೆ. ಆದರೆ ಕಂಟ್ರೋಲ್ ಮಾಡೋದು ನಾವು” ಎಂದವರು ಹೇಳಿದರು.

ಆರ್‌ಸಿಬಿ ತಂಡವು ಬೆಂಗಳೂರಿಗೆ ಆಗಮಿಸುತ್ತಿದ್ದು, ವಿಜಯ ಪಥಸಂಚಲನ ಹಾಗೂ ಸನ್ಮಾನ ಕಾರ್ಯಕ್ರಮಗಳ ಬಗ್ಗೆ ಚರ್ಚೆ ಮುಂದುವರಿದಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ನಗರದಲ್ಲಿ ಜನಸಂದಣಿ ನಿರೀಕ್ಷಿತವಾಗಿದ್ದು, ಸಾರ್ವಜನಿಕರು ಸಹ ಕಾರ್ಯನಿರತ ಅಧಿಕಾರಿಗಳಿಗೆ ಸಹಕಾರ ನೀಡಬೇಕು ಎಂದು ಮನವಿಯನ್ನು ಮಾಡಿದ್ದಾರೆ.