ಬೆಂಗಳೂರು(Bengaluru): ಪಿಎಸ್’ಐ ನೇಮಕಾತಿ ಅಕ್ರಮ ಪ್ರಕರಣದ ಪ್ರಮುಖ ಆರೋಪಿ ಆರ್.ಡಿ. ಪಾಟೀಲ ಲಂಚದ ಕುರಿತು ನೀಡಿರುವ ಹೇಳಿಕೆಯ ಬಗ್ಗೆ ಹೈಕೋರ್ಟ್’ನ ಹಾಲಿ ನ್ಯಾಯಮೂರ್ತಿಯಿಂದ ತನಿಖೆ ನಡೆಸಬೇಕು ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಒತ್ತಾಯಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ಆರ್.ಡಿ ಪಾಟೀಲ ಈ ಬಗ್ಗೆ ಲೋಕಾಯುಕ್ತಕ್ಕೆ ಪತ್ರ ಬರೆದಿದ್ದಾರೆ. ಪಿಎಸ್’ಐ ನೇಮಕಾತಿ ಅಕ್ರಮ ಪ್ರಕರಣದಿಂದ ಪಾರು ಮಾಡಲು ತನಿಖಾಧಿಕಾರಿ ₹ 3 ಕೋಟಿ ಲಂಚ ಕೇಳಿದ್ದರೆಂದು ಆರೋಪಿಸಿದ್ದಾರೆ. ಪ್ರಕರಣ ಮುಚ್ಚಿ ಹಾಕಲು ₹ 76 ಲಕ್ಷ ಹಣ ಕೊಟ್ಟಿರುವುದಾಗಿ ಬಹಿರಂಗಗೊಳಿಸಿದ್ದಾರೆ ಎಂದರು.
ಪಿಎಸ್’ಐ ನೇಮಕಾತಿ ಪ್ರಕರಣವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಗೃಹ ಸಚಿವ ಆರಗ ಜ್ಞಾನೇಂದ್ರ ಮುಚ್ಚಿ ಹಾಕಲು ರಯತ್ನಿಸುತ್ತಿದ್ದಾರೆ’ ಎಂದೂ ಸುರ್ಜೇವಾಲ ದೂರಿದರು.
ಮುಖ್ಯಮಂತ್ರಿ ಬೊಮ್ಮಾಯಿ ಉದ್ಯೋಗಾವಕಾಶ ಕಲ್ಪಿಸುವ ಭರವಸೆ ನೀಡಿದ್ದರು. ಒಂದು ಲಕ್ಷ ಉದ್ಯೋಗಗಳನ್ನು ಸೃಷ್ಟಿಸುತ್ತೇವೆ ಅಂದಿದ್ದರು. ಭರವಸೆ ಈಡೇರಿಸದೆ ಹುದ್ದೆಗಳನ್ನು ಮಾರಾಟಕ್ಕೆ ಇಟ್ಟಿದ್ದಾರೆ. ಕರ್ನಾಟಕದಲ್ಲಿ ಲೋಕೋಪಯೋಗಿ, ಪೊಲೀಸ್ ಸಬ್ ಇನ್’ಸ್ಪೆಕ್ಟರ್ ಸೇರಿದಂತೆ ಎಲ್ಲ ಹುದ್ದೆಗಳು ಮಾರಾಟಕ್ಕಿವೆ ಎಂದು ಆರೋಪಿಸಿದರು.
ಪಿಎಸ್’ಐ ಅಕ್ರಮ ನೇಮಕಾತಿಯಲ್ಲಿ ದೊಡ್ಡ ಭ್ರಷ್ಟಾಚಾರ ನಡೆದಿದೆ. ಈ ಪ್ರಕರಣದಲ್ಲಿ ಸ್ವತಃ ಪೊಲೀಸ್ ಅಧಿಕಾರಿಗಳೇ ಜೈಲಿನಲ್ಲಿದ್ದಾರೆ. ಬಿಜೆಪಿಯ ಹಿರಿಯ ನಾಯಕರ ಮಕ್ಕಳೇ ಇದರಲ್ಲಿ ಶಾಮೀಲಾಗಿದ್ದಾರೆ ಎಂದು ಅವರದೇ ಪಕ್ಷದ ನಾಯಕ ಬಸನಗೌಡ ಪಾಟೀಲ್ ಯತ್ನಾಳ ಆರೋಪಿಸಿದ್ದಾರೆ. ದುಡ್ಡು ಸ್ವೀಕರಿಸಲು ವಿಧಾಸೌಧವನ್ನು ಬಿಜೆಪಿಯವರು ಬಳಸಿಕೊಂಡಿದ್ದಾರೆ ಎಂದೂ ಆರೋಪಿಸಿದರು.