ಬೆಂಗಳೂರು(Bengaluru): ಪೇಸಿಎಂ ಅಭಿಯಾನ ಸದ್ದು ಮಾಡುತ್ತಿದ್ದಂತೆ ಇದಕ್ಕೆ ಪ್ರತಿಯಾಗಿ ‘ರೀ–ಡೂ ಸಿದ್ದರಾಮಯ್ಯ, ಇ.ಡಿ ಡಿಕೆಶಿ’ ಹೆಸರಿನಲ್ಲಿ ಮತ್ತೊಂದು ಅಭಿಯಾನವೂ ಸಾಮಾಜಿಕ ಜಾಲತಾಣಗಳಲ್ಲಿ ನಡೆಯಿತು. ಆದರೆ, ಇದು ತಮ್ಮದೇ ಅಭಿಯಾನ ಎಂದು ಬಿಜೆಪಿ ತಿಳಿಸಿಲ್ಲ.
ಪೇಸಿಎಂ ಅಭಿಯಾನಕ್ಕೆ ‘ಬಿಜೆಪಿ ಕರ್ನಾಟಕ’ದ ಅಧಿಕೃತ ಟ್ವೀಟರ್ ಖಾತೆಯಲ್ಲಿ ಆಕ್ರೋಶ ವ್ಯಕ್ತಪಡಿಸಿತು.
ಭಾರತ್ ಜೋಡೋ ಯಾತ್ರೆಗಾಗಿ ಕೇರಳದ ಕೊಲ್ಲಂನಲ್ಲಿ ತರಕಾರಿ ಮಾರುವವರನ್ನು ಕಾಂಗ್ರೆಸ್ ಕಾರ್ಯಕರ್ತರು ದೋಚಿದ ಪ್ರಕರಣ ಬೆಳಕಿಗೆ ಬಂದಿತ್ತು. ಕಾಂಗ್ರೆಸ್ಸಿಗರೇ, ಯಾತ್ರೆಗಾಗಿ ರಾಹುಲ್ ಗಾಂಧಿ ಅವರ ಫೋಟೋ ಹಾಕಿ, ಕ್ಯುಆರ್ ಕೋಡ್ ಸೃಷ್ಟಿಸಿ ಭಿಕ್ಷೆ ಬೇಡಬಹುದಲ್ಲವೇ? ಎಂದು ಕುಟುಕಿದೆ.
ಸಿದ್ದರಾಮಯ್ಯ ಅವರೇ, ನಿಮ್ಮ ಕಾಲದಲ್ಲಿ ಹಗರಣದ ಮೂಲಕ ಯಾವುದರ ಗಂಟು ಪಡೆದಿದ್ದು? ಸ್ಟೀಲ್ ಬ್ರಿಡ್ಜ್ ನಿರ್ಮಾಣದಲ್ಲಿ ಕಮಿಷನ್ ಯಾವ ಗಂಟಿನ ರೂಪದಲ್ಲಿ ಪಡೆದಿದ್ದು ಬಿಬಿಎಂಪಿಯಲ್ಲಿ ನಿಮ್ಮ ಅವಧಿಯಲ್ಲಿ 1400 ಕೋಟಿ ಹಗರಣ ನಡೆದಿತ್ತು. ಈ ಹಗರಣದಲ್ಲಿನ ಕಮಿಷನ್ ಮೊತ್ತವನ್ನು ಯಾವ ರೂಪದಲ್ಲಿ ಪಡೆದಿದ್ದು? ಎಂದು ಬಿಜೆಪಿ ಪ್ರಶ್ನಿಸಿತು.
ನನ್ನ ಹಾಗೂ ಕರ್ನಾಟಕದ ಹೆಸರು ಕೆಡಿಸುವ ಯತ್ನ
ನನ್ನ ಹಾಗೂ ಕರ್ನಾಟಕದ ಹೆಸರು ಕೆಡಿಸಲು ‘ಪೇಸಿಎಂ’ ಅಭಿಯಾನ ನಡೆಸಲಾಗುತ್ತಿದೆ. ಇಂತಹ ಸುಳ್ಳು ಅಭಿಯಾನ ನಡೆಸಲು ಎಲ್ಲರಿಗೂ ಬರುತ್ತದೆ ಎಂದು ಮುಖ್ಯಮಂತ್ರಿ ಬೊಮ್ಮಾಯಿ ಹೇಳಿದರು.
ಸುದ್ದಿಗಾರರ ಜತೆ ಮಾತನಾಡಿದ ಅವರು, ಇದು ವ್ಯವಸ್ಥಿತವಾಗಿ ನಡೆಸಿ ರುವ ಷಡ್ಯಂತ್ರ. ಪ್ರಕರಣ ದಾಖಲು ಮಾಡು ವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿ ಸಿದ್ದೇನೆ ಎಂದು ಹೇಳಿದರು.
ಆಧಾರರಹಿತವಾಗಿ ಅಭಿಯಾನ ಮಾಡುವುದು ಎಲ್ಲರಿಗೂ ಬರುತ್ತದೆ. ಆದರೆ ಇದು ಸುಳ್ಳು ಎಂದು ಜನಕ್ಕೆ ತಿಳಿಯುತ್ತದೆ. ಇದಕ್ಕೆ ಯಾವ ಬೆಲೆಯೂ ಇಲ್ಲ. ರಾಜ್ಯದ ಹೆಸರು ಕೆಡಿಸುವ ಇಂತಹ ಪ್ರಯತ್ನಕ್ಕೆ ಕಡಿವಾಣ ಹಾಕುವ ಪ್ರಯತ್ನ ನಮ್ಮದು ಎಂದರು.
ಪ್ರಕರಣ ಸಿಸಿಬಿಗೆ ವರ್ಗ:
‘ಪೇ ಸಿಎಂ’ ಎಂಬ ಘೋಷಣೆಯ ಭಿತ್ತಿಪತ್ರ ಹಾಗೂ ಕ್ಯೂಆರ್ ಕೋಡ್ ಅಭಿಯಾನದ ವಿರುದ್ಧ ಹೈಗ್ರೌಂಡ್ಸ್, ಸದಾಶಿವನಗರ, ಭಾರತಿ ನಗರ, ಶೇಷಾದ್ರಿಪುರಂ, ಜೆಸಿ ನಗರ ಸೇರಿ ನಗರದ ಹಲವು ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ. ಈ ಪ್ರಕರಣವನ್ನು ಸಿಸಿಬಿಗೆ ವರ್ಗಾಯಿಸಿ, ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಆದೇಶ ಹೊರಡಿಸಿದ್ದಾರೆ.
ಬಿಬಿಎಂಪಿ ಅಧಿಕಾರಿಗಳ ದೂರು ಆಧರಿಸಿ ಅಪರಿಚಿತರ ವಿರುದ್ಧ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ. ಸಿಸಿಟಿವಿ ಕ್ಯಾಮೆರಾ ಪರಿಶೀಲಿಸಲಾಗುತ್ತಿದೆ. ಮಂಗಳವಾರ ರಾತ್ರಿ ಈ ಭಿತ್ತಿಪತ್ರಗಳನ್ನು ಅಂಟಿಸಿರುವ ಸಾಧ್ಯತೆ ಇದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.