ಮನೆ ರಾಷ್ಟ್ರೀಯ ಬಿಹಾರದಲ್ಲಿ ಮರು ಚುನಾವಣೆ ನಡೆಸಬೇಕು – ರಾಬರ್ಟ್‌ ವಾದ್ರಾ

ಬಿಹಾರದಲ್ಲಿ ಮರು ಚುನಾವಣೆ ನಡೆಸಬೇಕು – ರಾಬರ್ಟ್‌ ವಾದ್ರಾ

0

ಇಂದೋರ್ : ಬಿಹಾರ ಚುನಾವಣೆಯಲ್ಲಿ ಆಡಳಿತಾರೂಢ ಎನ್‌ಡಿಎಗೆ ಭರ್ಜರಿ ಗೆಲುವು ಸಿಕ್ಕಿದ ಬೆನ್ನಲ್ಲೇ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ಅವರ ಪತಿ ರಾಬರ್ಟ್‌ ವಾದ್ರಾ ಅಲ್ಲಿ ಮರುಚುನಾವಣೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.

ಮಧ್ಯಪ್ರದೇಶಕ್ಕೆ ಎರಡು ದಿನಗಳ ಧಾರ್ಮಿಕ ಭೇಟಿಗೆ ಆಗಮಿಸಿದ ಅವರು ಮಾಧ್ಯಮಗಳ ಜೊತೆ ಮಾತನಾಡಿ, ವಾಸ್ತವವಾಗಿ ಬಿಹಾರದ ಜನರು ಫಲಿತಾಂಶದಿಂದ ಸಂತೋಷವಾಗಿಲ್ಲ. ಏನೇ ನಡೆದರೂ ಅದು ಚುನಾವಣಾ ಆಯೋಗದಿಂದಾಗಿ ಸಂಭವಿಸಿದೆ. ಚುನಾವಣಾ ಆಯೋಗ ಸಹಾಯ ಮಾಡಿದೆ ಎಂದು ದೂರಿದರು.

ರಾಹುಲ್ ಗಾಂಧಿ ಜನರನ್ನು ಭೇಟಿಯಾಗಲಿದ್ದು ಯವಕರು ಅವರ ಜೊತೆ ಕೈಜೋಡಿಸಲಿದ್ದಾರೆ. ಪ್ರಜಾಪ್ರಭುತ್ವವನ್ನು ರಕ್ಷಿಸಲು ಅವರು ಆಂದೋಲನವನ್ನು ಪ್ರಾರಂಭಿಸುತ್ತಾರೆ. ಬಿಹಾರದಲ್ಲಿ ಚುನಾವಣೆಯನ್ನು ಸರಿಯಾಗಿ ನಡೆಸಿಲ್ಲ ಎಂದು ಹೇಳಿದರು.

ದೇಶಕ್ಕೆ ಬದಲಾವಣೆಯ ಅಗತ್ಯವಿದೆ. ಸರ್ಕಾರ ಏನೇ ತಪ್ಪು ಮಾಡಿದರೂ, ಯುವಕರು ಅದನ್ನು ಇಷ್ಟಪಡುವುದಿಲ್ಲ. ನಾವು ಖಂಡಿತವಾಗಿಯೂ ಪ್ರಜಾಪ್ರಭುತ್ವದ ಉಳಿವಿಗಾಗಿ ಹೋರಾಡುತ್ತೇವೆ ಎಂದರು.

ಬಿಹಾರದ 243 ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಎನ್‌ಡಿಎ 202 ಸ್ಥಾನಗಳನ್ನು ಗೆಲ್ಲುವ ಮೂಲಕ ಅಧಿಕಾರವನ್ನು ತನ್ನಲ್ಲಿಯೇ ಉಳಿಸಿಕೊಂಡಿದೆ. ಬಿಜೆಪಿ 89, ಜೆಡಿಯು 85 ಸ್ಥಾನಗಳನ್ನು ಗೆದ್ದುಕೊಂಡಿದೆ. ಕಾಂಗ್ರೆಸ್, ಆರ್‌ಜೆಡಿ ಮತ್ತು ಇತರ ಪಕ್ಷಗಳ ಒಕ್ಕೂಟವಾದ ಮಹಾಘಟಬಂಧನ್ ಕೇವಲ 35 ಸ್ಥಾನಗಳನ್ನು ಮಾತ್ರ ಗಳಿಸಿದೆ.