ಮನೆ ರಾಜ್ಯ ಇಂಡಿಗನತ್ತ ಗ್ರಾಮದಲ್ಲಿ ಏ.29 ರಂದು ಮರು ಮತದಾನ

ಇಂಡಿಗನತ್ತ ಗ್ರಾಮದಲ್ಲಿ ಏ.29 ರಂದು ಮರು ಮತದಾನ

0

ಚಾಮರಾಜನಗರ: ಶುಕ್ರವಾರ ನಡೆದ ಮತದಾನದ ಸಂದರ್ಭದಲ್ಲಿ ಘರ್ಷಣೆಯಿಂದಾಗಿ ಮತಗಟ್ಟೆ ಮೇಲೆ ಕಲ್ಲು ತೂರಾಟ, ಇವಿಎಂ ಹಾನಿಗೊಳಗಾದ ಹನೂರು ತಾಲ್ಲೂಕಿನ ಇಂಡಿಗನತ್ತ ಗ್ರಾಮದಲ್ಲಿ ಸೋಮವಾರ (ಏ.29) ಮರು ಮತದಾನ ನಡೆಸಲು ಚುನಾವಣಾ ಆಯೋಗ ತೀರ್ಮಾನಿಸಿದೆ.

Join Our Whatsapp Group

ಬೆಳಿಗ್ಗೆ 7ರಿಂದ ಸಂಜೆ 6 ಗಂಟೆಯವರೆಗೆ ಮತದಾನ ನಡೆಯಲಿದೆ. ಈ ಮತಗಟ್ಟೆ ವ್ಯಾಪ್ತಿಯಲ್ಲಿ 528 ಮತದಾರರಿದ್ದಾರೆ. ಶುಕ್ರವಾರ ಇಲ್ಲಿ ಒಂಬತ್ತು ಮಂದಿಯಷ್ಟೇ ಮತದಾನ ಮಾಡಿದ್ದರು.

ಮತದಾನ ಬಹಿಷ್ಕಾರದ ವಿಚಾರದಲ್ಲಿ ಇಂಡಿಗನತ್ತ, ಮೆಂದಾರೆ ಗ್ರಾಮಸ್ಥರು ಹಾಗೂ ಪೊಲೀಸರ ನಡುವೆ ಉಂಟಾದ ಘರ್ಷಣೆ ಸಂದರ್ಭದಲ್ಲಿ ಉದ್ರಿಕ್ತರು, ಇಂಡಿಗನತ್ತ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ತೆರೆಯಲಾಗಿದ್ದ ಮತಗಟ್ಟೆಯ ಮೇಲೆ ಕಲ್ಲು ತೂರಾಟ ನಡೆಸಿದ್ದು ಮಾತ್ರವಲ್ಲದೇ ಒಳಗ್ಗೆ ನುಗ್ಗಿ ಇನ್ನಿತರ ಪರಿಕರಗಳನ್ನು ಕೆಳಕ್ಕೆ ಎಸೆದು ಹಾನಿ ಮಾಡಿದ್ದರು. ಇವಿಎಂಗೆ ಬೆಂಕಿ ಹಚ್ಚಲೂ ಯತ್ನಿಸಿದ್ದರು.

ಘಟನೆಗೆ ಸಂಬಂಧಿಸಿದಂತೆ ಜಿಲ್ಲಾ ಚುನಾವಣಾಧಿಕಾರಿ ಸಿ.ಟಿ. ಶಿಲ್ಪಾ ನಾಗ್‌ ಹಾಗೂ ಸಾಮಾನ್ಯ ವೀಕ್ಷಕ ಪಾರ್ಥ ಗುಪ್ತ ಅವರು ಚುನಾವಣಾ ಆಯೋಗಕ್ಕೆ ವರದಿ ಸಲ್ಲಿಸಿದ್ದರು. ಈ ವರದಿಯ ಆಧಾರದಲ್ಲಿ ಪ್ರಜಾ ಪ್ರಾತಿನಿಧ್ಯ ಕಾಯ್ದೆಯ ಸೆಕ್ಷನ್‌ 58 (2) ಮತ್ತು 58 ಎ(2) ಅಡಿಯಲ್ಲಿ ಮರು ಮತದಾನ ನಡೆಸಲು ತೀರ್ಮಾನಿಸಲಾಗಿದೆ ಎಂದು ಚುನಾವಣಾ ಆಯೋಗವು ರಾಜ್ಯ ಮುಖ್ಯ ಚುನಾವಣಾ ಅಧಿಕಾರಿಯವರಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದೆ.