ಮೈಸೂರು: ದೇಶದ ವ್ಯವಸ್ಥೆಗೆ ಸಂವಿಧಾನವೇ ಭದ್ರ ಅಡಿಪಾಯ. ಭಗವದ್ಗೀತೆಯಂತೆ ಸಂವಿಧಾನವನ್ನು ನಾವೆಲ್ಲರೂ ಓದಿ ಅದನ್ನು ನಾವು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಮೈಸೂರು ವಿಶ್ವವಿದ್ಯಾನಿಲಯದ ಪ್ರಭಾರ ಕುಲಪತಿ ಪ್ರೊ.ಎಚ್.ರಾಜಶೇಖರ್ ತಿಳಿಸಿದ್ದಾರೆ.
ಮಾನಸಗಂಗೋತ್ರಿಯ ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನಾ ಹಾಗೂ ವಿಸ್ತರಣ ಕೇಂದ್ರದ ವತಿಯಿಂದ 73ನೇ ವರ್ಷದ ಸಂವಿಧಾನ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾಟಾಚಾರಕ್ಕೆ ಸಂವಿಧಾನದ ಬಗ್ಗೆ ಯಾರೂ ತಿಳಿದುಕೊಳ್ಳಬಾರದು. ಸಂವಿಧಾನ ಅರ್ಥಗರ್ಭಿತವಾಗಿದೆ. ಎಲ್ಲರೂ ಸಂವಿಧಾನದ ಆಶಯವನ್ನು ಅರ್ಥಮಾಡಿಕೊಳ್ಳಬೇಕಿದೆ ಎಂದರು.
ಸವಿಸ್ತಾರವಾದ ಸಂವಿಧಾನವನ್ನು ಡಾ.ಬಿ.ಆರ್.ಅಂಬೇಡ್ಕರ್ ಅವರು ಭಾರತಕ್ಕೆ ಕೊಟ್ಟಿದ್ದಾರೆ. ಅದರ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿ. 73 ವರ್ಷದಿಂದ ಸಂವಿಧಾನದ ಬಗ್ಗೆ ಚರ್ಚೆ ಆಗುತ್ತಲೇ ಇದೆ. ಸಂವಿಧಾನ ಓದು ಎಂಬುದು ಚಳವಳಿ ರೂಪ ಪಡೆದುಕೊಂಡಿತು. ಪ್ರಜಾಪ್ರಭುತ್ವಕ್ಕೆ ಮೂಲ ಆಧಾರವೇ ಸಂವಿಧಾನ ಎಂದರು.
ಸಂವಿಧಾನದ ಬಗ್ಗೆ ಹೆಚ್ಚು ತಿಳಿದುಕೊಳ್ಳಬೇಕು. ಅದು ನಮ್ಮ ಬದುಕಿಗೆ ದಾರಿದೀಪದಂತೆ ನೋಡಬೇಕು. ಸಾಮಾಜಿಕ ನ್ಯಾಯ ಸಂವಿಧಾನದಿಂದ ಸಾಧ್ಯ. ಎನ್.ಇಪಿ ಬಂದಿದೆ. ಇಂಟರ್ ಕೋರ್ಸ್ ಆಗಿ ಇದೀಗ ಯಾವುದಾದರೂ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶ ಇದೆ. ಈ ನಿಟ್ಟಿನಲ್ಲಿ ಅಂಬೇಡ್ಕರ್ ಕೇಂದ್ರ ಬೆಳೆಯಲಿ. ಹೆಚ್ಚು ಸಂಶೋದನೆ ನಡೆಯಲಿ ಎಂದು ಆಶಿಸಿದರು.
ಕಾರ್ಮಿಕ ಅಧ್ಯಯನ ಕೇಂದ್ರದ ನಿರ್ದೇಶಕ ಪ್ರೊ.ಬಾಬು ಮ್ಯಾಥ್ಯೂ ಮಾತನಾಡಿ, ಭಾರತದ ಸಂವಿಧಾನಕ್ಕೆ ಜಗತ್ತಿನಲ್ಲಿ ಶ್ರೇಷ್ಠ ಸ್ಥಾನವಿದೆ. ದಕ್ಷಿಣ ಆಫ್ರಿಕಾದ ಸಂವಿಧಾನದಲ್ಲಿ ಹಲವು ಅಂಶಗಳನ್ನು ಭಾರತದ ಸಂವಿಧಾನದಲ್ಲಿ ಬಳಸಿಕೊಳ್ಳಲಾಗಿದೆ. ಆದರೆ, ಇಂದು ದಕ್ಷಿಣ ಆಫ್ರಿಕಾದ ಸಂವಿಧಾನ ಅಪಾಯಕ್ಕೆ ಸಿಲುಕಿದೆ. ಕಪ್ಪು ವರ್ಣಿಯರ ಮೇಲೆ ಮತ್ತೆ ದೌರ್ಜನ್ಯ ನಡೆಸಲಾಗುತ್ತಿದೆ. ಭಾರತದ ಸಂವಿಧಾನಕ್ಕೆ ಡಾ.ಬಿ.ಆರ್.ಅಂಬೇಡ್ಕರ್ ಅವರು ಭದ್ರ ಬುನಾದಿ ಹಾಕಿಕೊಟ್ಟಿದ್ದಾರೆ ಎಂದರು.
ಖಾಸಗಿ ಪದ್ದತಿ ಕಿತ್ತು ಹಾಕಿದರೆ ಮಾತ್ರ ಸಮಾಜವಾದಕ್ಕೆ ಅರ್ಥ ಸಿಗುತ್ತದೆ. ನೆಹರು ಪಂಚವಾರ್ಷಿಕ ಯೋಜನೆಯನ್ನು ಸೋವಿಯತ್ ಯೂನಿಯನ್ ನಿಂದ ತೆಗೆದುಕೊಂಡರು. ರಾಷ್ಟ್ರೀಯ ಬಂಡವಾಳದ ನಾಯಕರಾಗಿ ನೆಹರು ಕೆಲಸ ಮಾಡಿದರು. ನಮ್ಮ ಸಂವಿಧಾನ ಬಹಳ ವಿಶೇಷವಾಗಿ ರಚನೆಯಾಗಿದೆ. ಅಂಬೇಡ್ಕರ್ ಚಿಂತನೆಯೇ ಅದ್ಭುತ. ಅದರ ಫಲವಾಗಿ ನಾವಿಂದು ಸಂವಿಧಾನವನ್ನು ಕೊಡುಗೆಯಾಗಿ ಪಡೆದುಕೊಂಡಿದ್ದೇವೆ ಎಂದು ಹೇಳಿದರು.
ವರ್ಲ್ಡ್ ಬ್ಯಾಂಕ್ ಹಾಗೂ ವರ್ಲ್ಡ್ ಟ್ರೇಡ್ ನವರು ಎಲ್ಲವನ್ನೂ ಖಾಸಗೀಕರಣ ಮಾಡಲು ಹೊರಟಿದೆ. ವಿದೇಶಿ ಬಂಡವಾಳ ಕೂಡ ಮುನ್ನಲೆಗೆ ಬಂದಿದೆ. ಈ ಎಲ್ಲದರ ಒಟ್ಟು ಅಂಶವೇ ಹೊಸ ಸಂವಿಧಾನ ಸೃಷ್ಟಿ ಮಾಡುವುದೆ ಆಗಿದೆ. ಖಾಸಗಿ ಮಾಲೀಕರ ಕೈಯಲ್ಲಿ ಇರುವ ಯೂನಿವರ್ಸಲ್ ಸಾಮಾಜಿಕ ನ್ಯಾಯ ಒದಗಿಸಬೇಕು. ಪ್ರಭುತ್ವ ಒಂದು ವರ್ಗದಿಂದ ಮತ್ತೊಂದು ಬಂಡವಾಳಶಾಹಿಗಳ ಕೈಗೆ ಪ್ರಭುತ್ವ ಹೋಗುತ್ತಿದೆ. ಸಂವಿಧಾನವನ್ನು ಕೊಲ್ಲಲಾಗುತ್ತಿದೆ. ತಿದ್ದುಪಡಿ ಹೆಸರಲ್ಲಿ ಬದಲಾವಣೆ ಮಾಡಿಕೊಳ್ಳಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಸಮಾಜ ಕಾರ್ಯ ವಿಭಾಗದ ಪ್ರೊ.ಆರ್.ಶಿವಪ್ಪ, ಕೇಂದ್ರದ ನಿರ್ದೇಶಕ ಡಾ.ಎಸ್.ನರೇಂದ್ರ ಕುಮಾರ್ ಹಾಗೂ ಮೇಜರ್ ಒಂಬತ್ಕೆರೆ ಸೇರಿದಂತೆ ಇತರರು ಭಾಗವಹಿಸಿದ್ದರು.