ಗಾಜಿಯಾಬಾದ್: ಉತ್ತರ ಪ್ರದೇಶದ ಗಾಜಿಯಾಬಾದ್ ನಗರದ ರಾಜ್ ನಗರ ಎಕ್ಸ್‌ಟೆನ್ಶನ್ ಪ್ರದೇಶದಲ್ಲಿ ಒಂದು ಭಯಾನಕ ಘಟನೆ ನಡೆದಿದೆ. ರಿಯಲ್ ಎಸ್ಟೇಟ್ ಉದ್ಯಮಿ ಕುಲದೀಪ್ ತ್ಯಾಗಿ (ವಯಸ್ಸು 46) ಅವರು ಕ್ಯಾನ್ಸರ್‌ನಿಂದ ಬಳಲುತ್ತಿದ್ದು, ಚಿಕಿತ್ಸೆಗೆ ಹಣ ವ್ಯರ್ಥವಾಗಬಾರದು ಎಂಬ ಕಾರಣದಿಂದ ಪತ್ನಿ ಅಂಶು ತ್ಯಾಗಿಯನ್ನು ಗುಂಡಿಕ್ಕಿ ಕೊಂದು ನಂತರ ತಾನು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಿನ್ನೆ ಬೆಳಗ್ಗೆ ಬೆಳಕಿಗೆ ಬಂದಿದೆ.
ಘಟನೆ ರಾಧಾ ಕುಂಜ್ ಅಪಾರ್ಟ್‌ಮೆಂಟ್‌ನಲ್ಲಿ ಬೆಳಿಗ್ಗೆ 11 ಗಂಟೆ ಸುಮಾರಿಗೆ ಸಂಭವಿಸಿದೆ. ಪೊಲೀಸ್ ಮೂಲಗಳ ಪ್ರಕಾರ, ಪರವಾನಗಿ ಪಡೆದ ರಿವಾಲ್ವರ್ ಬಳಸಿಕೊಂಡು ಮೊದಲಿಗೆ ಪತ್ನಿಯನ್ನು ಹಾಸಿಗೆಯ ಮೇಲೆ ಕೊಂದ ನಂತರ ತಾನು ನೆಲದ ಮೇಲೆ ಗುಂಡು ಹಾರಿಸಿಕೊಂಡಿದ್ದಾರೆ. ಈ ದಂಪತಿಗೆ ಇಬ್ಬರು ಗಂಡು ಮಕ್ಕಳು ಇದ್ದು, ಘಟನೆ ನಡೆಯುವಾಗ ಅವರು ಮನೆಯಲ್ಲೇ ಇದ್ದರು. ಗಂಭೀರ ಶಬ್ದ ಕೇಳಿದ ಮಕ್ಕಳು ತಮ್ಮ ಪೋಷಕರ ಕೋಣೆಯತ್ತ ಧಾವಿಸಿದಾಗ, ಇಬ್ಬರ ಮೃತದೇಹವನ್ನು ಕಂಡು ಶಾಕ್ ಆಗಿದ್ದಾರೆ. ತಕ್ಷಣವೇ ಆಸ್ಪತ್ರೆಗೆ ಕರೆದುಕೊಂಡು ಹೋದರೂ, ವೈದ್ಯರು ಇಬ್ಬರೂ ಮೃತರಾಗಿರುವುದಾಗಿ ಘೋಷಿಸಿದರು.
ಪೊಲೀಸರಿಗೆ ಸಿಕ್ಕಿರುವ ಡೆತ್‌ನೋಟ್‌ನಲ್ಲಿ ಕುಲದೀಪ್ ತ್ಯಾಗಿ ಅವರು ತಮ್ಮ ವೇದನೆಯ ಕುರಿತಾಗಿ ವಿವರಿಸಿದ್ದಾರೆ. “ನಾನು ಕ್ಯಾನ್ಸರ್‌ನಿಂದ ಬಳಲುತ್ತಿದ್ದೇನೆ. ಆದರೆ ಈ ವಿಚಾರ ನನ್ನ ಕುಟುಂಬದವರಿಗೆ ತಿಳಿದಿಲ್ಲ. ಬದುಕುಳಿಯುವುದು ಕಷ್ಟ. ಚಿಕಿತ್ಸೆಗೆ ಹಣ ವ್ಯರ್ಥವಾಗಬಾರದು. ಪತ್ನಿ ಅಂಶು ನನ್ನ ಜೊತೆಯೇ ಇರಲು ಬಯಸಿದ್ದಳು. ಬದುಕಿದರೂ, ಸತ್ತರೂ ಒಟ್ಟಿಗೆ ಇರುತ್ತೇವೆ ಎಂದು ಒಪ್ಪಿಕೊಂಡಿದ್ದೇವೆ. ನಾವು ಒಟ್ಟಿಗೆ ಸಾಯಲು ನಿರ್ಧರಿಸಿದ್ದೇವೆ. ಈ ವಿಷಯದಲ್ಲಿ ಯಾರ ಮೇಲೂ ತಪ್ಪಿಲ್ಲ” ಎಂದು ಡೆತ್‌ನೋಟ್‌ನಲ್ಲಿ ಬರೆದಿದ್ದಾರೆ.
ಕುಲದೀಪ್ ತ್ಯಾಗಿ ಅವರ ತಂದೆ ನಿವೃತ್ತ ಪೊಲೀಸ್ ಅಧಿಕಾರಿ ಎಂದು ತಿಳಿದುಬಂದಿದ್ದು, ಈ ದುರಂತವು ಸ್ಥಳೀಯರನ್ನು ಮತ್ತು ಬಂಧುಗಳನ್ನು ಆಘಾತಕ್ಕೊಳಪಡಿಸಿದೆ. ಪೊಲೀಸರು ಪ್ರಕರಣವನ್ನು ತನಿಖೆ ಮಾಡುತ್ತಿದ್ದಾರೆ.