ಮನೆ ಕಾನೂನು ಎಫ್‌ಐಆರ್ ಮುನ್ನವೇ ದಾಖಲೆ ಸಂಗ್ರಹಿಸುವಂತಿಲ್ಲ

ಎಫ್‌ಐಆರ್ ಮುನ್ನವೇ ದಾಖಲೆ ಸಂಗ್ರಹಿಸುವಂತಿಲ್ಲ

0

ಭ್ರಷ್ಟಾಚಾರ ನಿಯಂತ್ರಣ ಕಾಯಿದೆಯಡಿ ಎಫ್ಐಆರ್ ದಾಖಲಿಸುವ ಮುನ್ನವೇ ಲೋಕಾಯುಕ್ತ ಪೊಲೀಸರು ದಾಖಲೆಗಳ ಸಂಗ್ರಹಣೆ ಮಾಡುವುದು ಹಾಗೂ ಪ್ರಾಥಮಿಕ ತನಿಖೆ ನಡೆಸುವುದು – ಸೆಕ್ಷನ್ 17 ‘A’ನ ಸ್ಪಷ್ಟ ಉಲ್ಲಂಘನೆ ಎಂದು – ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.

ಸಕ್ಷಮ ಪ್ರಾಧಿಕಾರದಿಂದ ಪೂರ್ವಾನುಮತಿ ಪಡೆದು ತನಿಖಾಧಿಕಾರಿ ವಿಚಾರಣೆ / ತನಿಖೆ ನಡೆಸುವುದನ್ನು ಕಡ್ಡಾಯಗೊಳಿಸಿರುವ ಕಾಯಿದೆ ಸೆಕ್ಷನ್ 17’A’ನ ಸ್ಪಷ್ಟ ಉಲ್ಲಂಘನೆ ಎಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ದಾವಣಗೆರೆ ಜಿಲ್ಲೆಯ ಜಗಳೂರು ಪಟ್ಟಣ ಪಂಚಾಯಿತಿ ಕಚೇರಿಯಲ್ಲಿ 2015-16ನೇ ಸಾಲಿನಲ್ಲಿ ಮುಖ್ಯಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದ ಎಸ್. ಲಕ್ಷ್ಮೀ ಸೇರಿದಂತೆ ಇತರೆ – ಇಬ್ಬರು ಅಧಿಕಾರಿಗಳು ಸಲ್ಲಿಸಿದ್ದ ಅರ್ಜಿಯನ್ನು ಸೆಕ್ಷನ್ 17 ‘A’ನ ಉಲ್ಲಂಘನೆ ಎಂದು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಪೀಠ ಈ ಆದೇಶ ಮಾಡಿದೆ.

”ಭ್ರಷ್ಟಾಚಾರ ನಿಯಂತ್ರಣ ಕಾಯಿದೆ -1983ರ ಸೆಕ್ಷನ್ 17’A’ ಅಡಿಯಲ್ಲಿ ಸಕ್ಷಮ ಪ್ರಾಧಿಕಾರದಿಂದ ಪೂರ್ವಾನುಮತಿ ಪಡೆಯದೆ ಲೋಕಾಯುಕ್ತ ಪೊಲೀಸರು ಅನಾಮಧೇಯ ದೂರು ಆಧರಿಸಿ ಸರಕಾರಿ ಸೇವಕರ ವಿರುದ್ಧ ಎಫ್ಐಆರ್ ದಾಖಲಿಸುವ ಹಾಗೂ ಸಕ್ಷಮ ಪ್ರಾಧಿಕಾರದಿಂದ ಪೂರ್ವಾನುಮತಿ ಪಡೆಯುವ ಮುನ್ನ ವಿವರವಾದ ಪ್ರಾಥಮಿಕ ತನಿಖೆ ನಡೆಸುವುದು, ಅಧಿಕಾರಿಗಳನ್ನು ವಿಚಾರಣೆಗೆ ಕರೆಯುವುದು ಮತ್ತು ದಾಖಲೆ ಸಂಗ್ರಹಿಸುವುದು, ದಸ್ತಾವೇಜು ನಿರ್ಮಿಸುವುದು ಕಾನೂನು ಬಾಹಿರ ಕ್ರಮ. ಅಂತಹ ಸಂಶೋಧನೆಯು ಸೆಕ್ಷನ್ 17 ‘A’ ರೂಪಿಸಿದ ಶಾಸಕಾಂಗದ ಉದ್ದೇಶವನ್ನೇ ನಿಶ್ಚಲಗೊಳಿಸುತ್ತದೆ” ಎಂದು ಹೈಕೋರ್ಟ್ ಪೀಠ ಹೇಳಿದೆ.

ನೌಕರರಿಗೆ ರಕ್ಷಣೆ : ನಿಷ್ಪ್ರಯೋಜಕ / ಕಿರುಕುಳ ನೀಡುವಂತಹ ಪ್ರಾಸಿಕ್ಯೂಷನ್ ಹಾಗೂ ದೂರುಗಳ ತನಿಖೆಯಿಂದ ಸರಕಾರಿ ನೌಕರರಿಗೆ ಸೆಕ್ಷನ್ 17 ‘A’ ರಕ್ಷಣೆ ಕಲ್ಪಿಸುತ್ತದೆ. ಸಾರ್ವಜನಿಕ ಹಿತಾಸಕ್ತಿ ಹಾಗೂ ಆರೋಪಿತ ಅಧಿಕಾರಿಗಳಿಗೆ ಕಾನೂನಿನಲ್ಲಿ ಲಭ್ಯವಿರುವ ರಕ್ಷಣಾ ಕ್ರಮ ಗಮನದಲ್ಲಿರಿಸಿಕೊಂಡು ಹೇಳುವುದಾದರೆ ಸರಕಾರ ಸುಳ್ಳು ದೂರುಗಳ ಕುರಿತ ವಿಚಾರಣೆ / ತನಿಖೆ ತಡೆಯಬೇಕಾಗುತ್ತದೆ. ಇಲ್ಲವಾದರೆ ಅಮಾಯಕ ಅಧಿಕಾರಿಗಳಿಗೆ ಕಿರುಕುಳ ಉಂಟು ಮಾಡುವ ಪ್ರಾಸಿಕ್ಯೂಷನ್,ಗಳು ಹೆಚ್ಚಾಗುವ ಸಾಧ್ಯತೆಯಿದೆ. ಆದರೆ, ಈ ರಕ್ಷಣಾ ಕವಚವನ್ನು ತಪ್ಪಿತಸ್ಥ ಸರಕಾರಿ ನೌಕರನಿಗೆ ಕಲ್ಪಿಸಲಾಗುವುದಿಲ್ಲ ಎಂದು ಆದೇಶದಲ್ಲಿ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.