ಮೈಸೂರು: ಲೋಕಸಭಾ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿ ಕರಾಮುವಿಯಲ್ಲಿ ಹಳೆಯ/ ಹಿಂದಿನ ದಿನಾಂಕಗಳನ್ನು ನಮೂದಿಸಿ ಬೋಧಕ ಮತ್ತು ಬೋಧಕೇತರ ಹುದ್ದೆಗಳ ನೇಮಕಾತಿ ಮಾಡಿದ್ದಾರೆ ಎಂದು ಆರೋಪಿಸಿ ಸತ್ಯನಾರಾಯಣ ಆರ್ ಎನ್ ಎಂಬುವವರು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳು ಆಗಿರುವ ಡಾ.ಕೆ.ವಿ.ರಾಜೇಂದ್ರ ಹಾಗೂ ರಾಜ್ಯ ಚುನಾವಣಾ ಆಯುಕ್ತರಿಗೆ ದೂರು ನೀಡಿದ್ದಾರೆ.
ರಾಜ್ಯಪಾಲರ ಅಧಿಸೂಚನೆ ಪತ್ರ ಸಂಖ್ಯೆ 65/06/2024 ದಿನಾಂಕ 16.3.24ರ ಅನ್ವಯ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಆರೋಪಿತ ಕುಲ ಸಚಿವ ಕೆ.ಎನ್ ಮೂರ್ತಿ ಅವರಿಗೆ ಅವಧಿಗೂ ಮುಂಚಿತವಾಗಿ ಕುಲಸಚಿವ ಹುದ್ದೆಯಿಂದ ಅವರ ಮಾತೃ ವಿಭಾಗಕ್ಕೆ ಹಿಂದಕ್ಕೆ ಕಳುಹಿಸಿ ಕುಲಸಚಿವರ ಹುದ್ದೆಗೆ ಮೈಸೂರು ವಿಶ್ವವಿದ್ಯಾನಿಲಯದ ಶಿಕ್ಷಣ ಅಧ್ಯಯನ ಕೇಂದ್ರದ ಕೆ.ಬಿ.ಪ್ರವೀಣ್ ಅವರನ್ನು ನೇಮಕ ಮಾಡಲಾಗಿದೆ.
ಆದೇಶದನ್ವಯ ಕುಲಸಚಿವರಾಗಿದ್ದ ಆರೋಪಿ ಕೆ.ಎಲ್ ಎನ್ ಮೂರ್ತಿ ಅವರು ಮಾಚ್ 16 ರಂದು ಅಪರಾಹ್ನ ಕುಲಸಚಿವರ ಹುದ್ದೆಯಿಂದ ಬಿಡುಗಡೆಗೊಳಿಸಲಾಗಿದ್ದು, ಅದೇ ದಿನ ಅಪರಾಹ್ನವೇ ಕೆ.ಬಿ.ಪ್ರವೀಣ್ ಅವರು ವರದಿ ಮಾಡಿಕೊಂಡಿರುವುದಾಗಿ ಆದೇಶ ಪತ್ರದಲ್ಲಿ ನಮೂದಾಗಿದೆ. ಇದು ತರಾತುರಿಯಲ್ಲಿ ನಡೆದ ಘಟನೆ ಎಂಬುದುನ್ನು ಸಾಬೀತು ಪಡಿಸಿದಂತಾಗಿದೆ.
ಹಲವಾರು ಹಗರಣಗಳ ಆರೋಪ ಹೊತ್ತು ವಿವಿಧ ತನಿಖಾ ಸಂಸ್ಥೆಗಳಿಂದ ವಿಚಾರಣೆ/ ತನಿಖೆಗೆ ಒಳಪಟ್ಟಿರುವ ಕರಾಮುವಿ ಕುಲಪತಿ ಶರಣಪ್ಪ ವಿ ಹಲ್ಸೆ ಮತ್ತು ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾನಿಲಯ ಸ್ನಾತಕೋತ್ತರ ಇತಿಹಾಸ ಮತ್ತು ಪ್ರಾಚ್ಯ ವಸ್ತು ವಿಭಾಗ, ಕರಾಮುವಿ ಕುಲಸಚಿವರಾಗಿದ್ದ ಡಾ. ಕೆ.ಎಲ್ ಎನ್ ಮೂರ್ತಿ ಹಲವಾರು ಅಕ್ರಮ ತಾತ್ಕಾಲಿಕ ನೇಮಕಾತಿ, ನೇರ ನೇಮಕಾತಿ, ಹಣಕಾಸು ವೆಚ್ಚ, ಬ್ಯಾಂಕ್ ಖಾತೆಗಳ ನಿರ್ವಹಣೆ ವಿಚಾರವಾಗಿ ರಾಜ್ಯ ಲೆಕ್ಕಪತ್ರ ಇಲಾಖೆಯ ತನಿಖಾ ವರದಿಯಲ್ಲಿ ಆಕ್ಷೇಪ ಮತ್ತು ಭ್ರಷ್ಟಾಚಾರಕ್ಕೆ ಸಹಕರಿಸಿದ ಆರೋಪಗಳನ್ನು ಹೊತ್ತಿರುತ್ತಾರೆ.
ಕೆ.ಎಲ್ ಎನ್ ಮೂರ್ತಿ ಅವರು ಕುಲಸಚಿವ ಹುದ್ದೆಯಿಂದ ಬಿಡುಗಡೆಗೊಳ್ಳುವ ಸಂದರ್ಭದಲ್ಲಿ ಲೋಕಸಭಾ ಚುನಾವಣೆ ನೀತಿ ಸಂಹಿತೆ ಉಲ್ಲಂಘಿಸಿ ಹಳೆಯ ದಿನಾಂಕಗಳನ್ನು ನಮೂದಿಸಿ 40 ರಿಂದ 50 ಬೋಧಕ ಮತ್ತು ಬೋಧಕೇತರ ಹುದ್ದೆಗಳಿಗೆ ತಾತ್ಕಾಲಿಕ ನೇಮಕಾತಿ ಮಾಡಿರುತ್ತಾರೆ. ಈ ನೇಮಕಾತಿಗೆ ಕೆ.ಎಲ್ ಎನ್ ಮೂರ್ತಿ ಅವರು 3 ರಿಂದ 5 ಲಕ್ಷ ಹಣ ಪಡೆದುಕೊಂಡಿರುವುದಾಗಿ ಮಾಹಿತಿ ಲಭ್ಯವಾಗಿದೆ.ಆದರೆ ಅಭ್ಯರ್ಥಿಗೆಳಿ ನೇಮಕಾತಿ ಆದೇಶ ನೀಡದೇ ರಹಸ್ಯವಾಗಿ ಕಡತದಲ್ಲಿರಿಸಿ ಮರೆಮಾಚಿರುತ್ತಾರೆ. ಆದಾಗ್ಯೂ ಆಯ್ಕೆಯಾದ ಅಭ್ಯರ್ಥಿಗಳು ವಿವಿಧ ವಿಭಾಗ ಕಚೇರಿಗಳಲ್ಲಿ ಕರ್ತವ್ಯಕ್ಕೆ ಹಾಜರಿರುತ್ತಾರೆ.
ತಾತ್ಕಾಲಿಕ ನೇಮಕಾತಿ ಅಭ್ಯರ್ಥಿಗಳು ವಿಶ್ವವಿದ್ಯಾನಿಲಯದ ವಿವಿಧ ವಿಭಾಗ/ಕಚೇರಿಗಳಲ್ಲಿ ಈಗಾಗಲೇ ಅಧಿಕೃತವಾಗಿ ಹಾಜರಿದ್ದು, ಕರ್ತವ್ಯ ನಿರ್ವಹಿಸುತ್ತಿರುವುದು ವಿಭಾಗ/ಕಚೇರಿಗಳಲ್ಲಿ ಸಿಸಿಟಿವಿ ಕ್ಯಾಮೆರಾ ಫೂಟೇಜ್ ಗಳಲ್ಲಿ ದಾಖಲಾಗಿರುತ್ತದೆ. ಈ ಸಂಬಂಧ ಇತ್ತೀಚಿನ ನೇಮಕಾತಿ ಆದೇಶ, ಹಾಜರಿ ಪುಸ್ತಕಗಳಿ, ವಿಭಾಗ/ಕಚೇರಿಗಳ ಸಿಸಿಟಿವಿ ಕ್ಯಾಮೆರಾ ಫೂಟೇಜ್ ಗಳನ್ನು ವಶಕ್ಕೆ ಪಡೆದು ವೀಕ್ಷಿಸಿದರೆ ಸತ್ಯಾಂಶ ತಿಳಿದುಬರಲಿದೆ.
ಕರ್ನಾಟಕ ಸರ್ಕಾರ ಉನ್ನತ ಶಿಕ್ಷಣ ಇಲಾಖೆ, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಕ್ರಮವಾಗಿ 8.8.2023 ಮತ್ತು 29.12.2023 ಸುತ್ತೋಲೆಯಲ್ಲಿ ಯಾವುದೇ ನೇಮಕಾತಿ ಮಾಡಿಕೊಳ್ಳದಂತೆ, ನೇಮಕಾತಿ ಮಾಡಿಕೊಳ್ಳುವಾಗ ಸರ್ಕಾರದ ನಿಯಮ ಪಾಲಿಸುವಂತೆ ನಿರ್ದೇಶನ ನೀಡಲಾಗಿದೆ. ಆದರೂ ಕರಾಮುವಿ ರಿಜಿಸ್ಟ್ರಾರ್ ಮತ್ತು ಕುಲಪತಿಗಳು ನಿರಂತರವಾಗಿ ಅಕ್ರಮ ನೇಮಕಾತಿಗಳನ್ನು ಕದ್ದುಮುಚ್ಚಿ ಮಾಡುತ್ತಲೇ ಇದ್ದಾರೆ ಎಂದು ಆರೋಪಿಸಲಾಗಿದೆ. ಈ ಕುರಿತು ಕರಾಮುವಿ ಹಣಕಾಸು ವಿಭಾಗದ ಎಫ್ ಓ ಕಚೇರಿಯಿಂದ ಮಾಹಿತಿ ಲಭ್ಯವಾಗಲಿದೆ ಎಂದು ದೂರುದಾರ ಸತ್ಯನಾರಾಯಣ ಆರ್ ಎನ್ ತಿಳಿಸಿದ್ದಾರೆ.
ಅಗತ್ಯಕ್ಕಿಂತಲೂ ಹೆಚ್ಚು ನೇಮಕಾತಿ ಮಾಡಿಕೊಂಡು ವಿಶ್ವವಿದ್ಯಾನಿಲಯದ ಆರ್ಥಿಕ ಪರಿಸ್ಥಿತಿ ದಿವಾಳಿ ಮಾಡಿ ಕರಾಮುವಿ ಮುಚ್ಚುವ ಸಂಭವ ಹೆಚ್ಚಾಗಿದೆ. ಇದರಿಂದ ಲಕ್ಷಾಂತರ ವಿದ್ಯಾರ್ಥಿಗಳು ಪದವಿ ಶಿಕ್ಷಣದಿಂದ ವಂಚಿತರಾಗುತ್ತಾರೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ‘
ಆದ್ದರಿಂದ ಲೋಕಸಭಾ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿ ಹಿಂದಿನ ದಿನಾಂಕಗಳನ್ನು ನಮೂದಿಸಿಕೊಂಡು ಈ ಭ್ರಷ್ಟ ಕರಾಮುವಿ ಅಧಿಕಾರಿಗಳ ದರ್ಬಾರ್ ಮಾಡುತ್ತಿದ್ದು, ಕರಾಮುವಿಗೆ ಭೇಟಿ ನೀಡಿ ಅಕ್ರಮಗಳ ತನಿಖೆ ಮಾಡಿ ಕುಲಸಚಿವ ಮತ್ತು ಕುಲಪತಿ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಸತ್ಯನಾರಾಯಣ ಆರ್ ಎನ್ ಮನವಿ ಮಾಡಿದ್ದಾರೆ.