ಬೆಂಗಳೂರು : ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕ್ರಿಕೆಟ್ ಆಡಿಸಲು ಅನುಮತಿ ನಿರಾಕರಿಸಿದ ಸರ್ಕಾರದ ಕ್ರಮವನ್ನ ಗೃಹ ಸಚಿವ ಪರಮೇಶ್ವರ್ ಸಮರ್ಥಿಸಿಕೊಂಡಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ನ್ಯಾ.ಕುನ್ಹಾ ವರದಿಯ ಯಾವ ಶಿಫಾರಸ್ಸನ್ನೂ ಕೆಎಸ್‌ಸಿಎನವರು ಅಳವಡಿಕೆ ಮಾಡಿರಲಿಲ್ಲ. ಹೀಗಾಗಿ ಉನ್ನತ ಮಟ್ಟದ ಸಮಿತಿಯಿಂದ ಅನುಮತಿ ನಿರಾಕರಿಸಲಾಯ್ತು ಎಂದಿದ್ದಾರೆ.
ಕಾಲ್ತುಳಿತ ಘಟನೆ ಆದ ಮೇಲೆ ನ್ಯಾ.ಕುನ್ಹಾ ನೇತೃತ್ವದಲ್ಲಿ ಆಯೋಗ ರಚಿಸಿಲಾಗಿತ್ತು. ಅವರು ಕೊಟ್ಟ 17 ಶಿಫಾರಸ್ಸುಗಳನ್ನು ಕೆಎಸ್‌ಸಿಎ ಅವರಿಗೆ ನೀಡಿದ್ದೆವು, ಅದಕ್ಕೆ ಅವರು ಸ್ಪಂದಿಸಬೇಕಿತ್ತು. ಆದರೆ ಅವರು ಇದುವರೆಗೂ ಏನೂ ಮಾಡಿದಂತೆ ಕಂಡುಬಂದಿಲ್ಲ. ಎಲ್ಲ ಇಲಾಖೆಗಳ ಹಿರಿಯ ಅಧಿಕಾರಿಗಳಿರೋ ಸಮಿತಿಯವರು ಸ್ಥಳಕ್ಕೆ ಭೇಟಿ ಕೊಟ್ಟಿದ್ದರು.
ಒಂದೂ ಶಿಫಾರಸ್ಸು ಕೂಡಾ ಅಲ್ಲಿ ಪೂರ್ತಿ ಮಾಡಿರಲಿಲ್ಲ. ಹಾಗಾಗಿ ಅನುಮತಿ ಕೊಡಲು ಸಾಧ್ಯವಾಗಿಲ್ಲ ಅಂತ ಸಮಿತಿ ನಿರ್ಧಾರ ಕೈಗೊಂಡಿದೆ. ನ್ಯಾ.ಕುನ್ಹಾ ಶಿಫಾರಸ್ಸುಗಳಂತೆ ಅವರು ಕ್ರಮ ಕೈಗೊಂಡರೆ ಅನುಮತಿ ಸಿಗಲಿದೆ ಅಂತ ತಿಳಿಸಿದ್ದಾರೆ.
ಇನ್ನು ಬೈರತಿ ಬಸವರಾಜು ಬಂಧನಕ್ಕೆ ಲುಕ್ ಔಟ್ ನೋಟಿಸ್ ಹೊರಡಿಸಿರುವ ವಿಚಾರ ಮಾತಾಡಿದ ಅವರು, ಏನು ಕ್ರಮ ತಗೋಬೇಕೋ ಸಿಐಡಿ ಪೊಲೀಸರು ತಗೋತಾರೆ. ಸಿಐಡಿಯವ್ರಿಗೆ ನಾವು ಹೀಗೇ ಮಾಡಿ ಅಂತ ಹೇಳಕ್ಕಾಗಲ್ಲ. ಕಾನೂನು ಪ್ರಕಾರ ಅವರು ಕ್ರಮ ವಹಿಸ್ತಿದ್ದಾರೆ ಎಂದಿದ್ದಾರೆ.
ದಾವಣಗೆರೆ ಡ್ರಗ್ಸ್ ಕೇಸ್‌ನಲ್ಲಿ ಕಾಂಗ್ರೆಸ್ ಮುಖಂಡನ ಬಂಧನ ಬಗ್ಗೆ ಮಾತಾಡಿದ ಅವರು, ಯಾವ ಮುಖಂಡ ಆದರೂ ಕಾನೂನು ವಿರುದ್ಧ ನಡೆದುಕೊಂಡರೆ ಬಂಧನ ಆಗಲೇಬೇಕು. ಯಾರೇ ಆದರೂ ಕಾನೂನು ಪಾಲಿಸಬೇಕು, ಅದರಲ್ಲಿ ಯಾವುದೇ ಪಕ್ಷಪಾತ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.















