ಮನೆ ಸ್ಥಳೀಯ ಕುಡಿಯುವ ನೀರು ಸರಬರಾಜು ಮುನ್ನ ನಿಯಮಿತವಾಗಿ ನೀರಿನ ಪರೀಕ್ಷೆ ನಡೆಸಿ: ಡಾ ಕೆ.ವಿ.ರಾಜೇಂದ್ರ

ಕುಡಿಯುವ ನೀರು ಸರಬರಾಜು ಮುನ್ನ ನಿಯಮಿತವಾಗಿ ನೀರಿನ ಪರೀಕ್ಷೆ ನಡೆಸಿ: ಡಾ ಕೆ.ವಿ.ರಾಜೇಂದ್ರ

0

ಮೈಸೂರು: ಸಾರ್ವಜನಿಕರಿಗೆ ಕುಡಿಯುವ ನೀರನ್ನು ಸರಬರಾಜು ಮಾಡುವ ಮುನ್ನ ನಿಯಮಿತವಾಗಿ ನೀರಿನ ಪರೀಕ್ಷೆ ನಡೆಸಿ ಎಂದು ಜಿಲ್ಲಾಧಿಕಾರಿ ಡಾ. ಕೆ.ವಿ.ರಾಜೇಂದ್ರ  ಅಧಿಕಾರಿಗಳಿಗೆ ಸೂಚಿಸಿದರು.

Join Our Whatsapp Group

ಅವರು ಇಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಸಾರ್ವಜನಿಕರಿಗೆ ಸರಬರಾಜು ಮಾಡುತ್ತಿರುವ ಕುಡಿಯುವ ನೀರಿನ ಗುಣಮಟ್ಟ ಪರಿಶೀಲನೆ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಕುರಿತು ವಿಡಿಯೋ ಕಾನ್ಫರೆನ್ಸ್ ನಡೆಸಿ ಮಾತನಾಡಿದರು.

ಕಲುಷಿತ ನೀರು ಸೇವನೆಯಿಂದ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ. ಕುಡಿಯುವ ನೀರಿಗೆ ಯಾವುದೇ ಕಲುಷಿತ ನೀರು ಸೇರ್ಪಡೆಯಾಗದಂತೆ ಎಚ್ಚರವಹಿಸಿ ಎಂದರು.

ನೀರಿನ ಸರಬರಾಜು ವ್ಯವಸ್ಥೆಯಲ್ಲಿರುವ ಎಲ್ಲಾ ನೀರು ಶೇಖರಣಾ ಘಟಕಗಳನ್ನು ಸ್ವಚ್ಛಗೊಳಿಸಿ ಪ್ರತಿ ಹಂತದಲ್ಲಿಯೂ ಕ್ಲೋರಿನೇಷನ್ ಮಾಡಲು ಕ್ರಮವಹಿಸಿ ಎಂದರು.

ನೀರಿನ ಮೂಲಗಳಾದ ಕೊಳವೆ ಬಾವಿಗಳ ಸುತ್ತಮುತ್ತಲೂ ಯಾವುದೇ ಕಲುಷಿತ ಅಥವಾ ಚರಂಡಿ ನೀರು ನಿಲ್ಲದಂತೆ ನೀರು ಸರಾಗವಾಗಿ ಹರಿಯಲು ಸೂಕ್ತ ಚರಂಡಿ ವ್ಯವಸ್ಥೆ ಕೈಗೊಂಡು ನೀರಿನ ಮೂಲದ ಸುತ್ತ ಕಾಂಕ್ರೀಟ್ ಕಟ್ಟೆ ಕಟ್ಟಲು ಅಗತ್ಯ ಕ್ರಮ ವಹಿಸಬೇಕು ಎಂದು ಸೂಚಿಸಿದರು.

ಪರೀಕ್ಷೆ ನಡೆಸದೆ ಕುಡಿಯುವ ನೀರು ಸರಬರಾಜು ಮಾಡಿ ಸಾರ್ವಜನಿಕರ ಆರೋಗ್ಯಕ್ಕೆ ಯಾವುದೇ ತೊಂದರೆ ಉಂಟಾದಲ್ಲಿ ಸಂಬಂಧಪಟ್ಟ ನಗರ ಸ್ಥಳೀಯ ಸಂಸ್ಥೆಯ ಮುಖ್ಯಸ್ಥರನ್ನು ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ಗ್ರಾಮಗಳಲ್ಲಿ ಸ್ವಚ್ಛತೆ, ಚರಂಡಿಗಳ ನಿರ್ವಹಣೆ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಮೇಲ್ವಿಚಾರಣೆ ನಡೆಸಬೇಕು. ಹೋಟೆಲ್‌, ರಸ್ತೆಯ ಬದಿಯ ಫಾಸ್ಟ್‌ಫುಡ್‌ ಕೇಂದ್ರಗಳಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳುವ ಬಗ್ಗೆ ತಿಳಿಸಬೇಕು. ಶುದ್ಧ ಕುಡಿಯುವ ನೀರು ಒದಗಿಸುವಂತೆ ಕಟ್ಟುನಿಟ್ಟಿನ ಸೂಚನೆ ಕೊಡಬೇಕು’ ಎಂದು ಹೇಳಿದರು.

ಜಿಲ್ಲೆಯಲ್ಲಿ ಡೆಂಗ್ಯೂ, ಚಿಕನ್‍ಗುನ್ಯಾ ವ್ಯಾಪಿಸದಂತೆ ತೀವ್ರ ನಿಗಾವಹಿಸುವಂತೆ ಅಧಿಕಾರಿಗಳು ಮುಂದಾಗಬೇಕು. ವಿವಿಧ ಇಲಾಖೆಯ ಅಧಿಕಾರಿಗಳು ಸಮನ್ವಯತೆ ಯೊಂದಿಗೆ ಕೆಲಸ ನಿರ್ವಹಿಸಬೇಕು ಎಂದು ಅವರು ತಿಳಿಸಿದರು.

ನೀರಿನ ವ್ಯವಸ್ಥೆಯಡಿ ಬರುವ ಎಲ್ಲಾ ಪೈಪ್‌ ಲೈನ್ ಗಳನ್ನು ಪ್ರತಿದಿನವೂ ಕಣ್ಣಗಾವಲು ನಡೆಸಿ. ಪೈಪ್ ಲೈನ್ ಹಾನಿಯಾಗಿದ್ದರೆ ಕಲುಷಿತ ನೀರು ಕುಡಿಯುವ ನೀರಿಗೆ ಸೇರ್ಪಡೆಯಾಗುವ ಸಾಧ್ಯತೆಯಿದೆ. ಗಮನವಹಿಸಿ ದುರಸ್ಥಿ ಕಾರ್ಯ ನಡೆಯಬೇಕು ಎಂದರು.

ಒಂದು ವೇಳೆ ನಗರ ಪ್ರದೇಶಗಳಲ್ಲಿ ಕರುಳು ಬೇನೆ, ವಾಂತಿ, ಭೇಧಿ ಪ್ರಕರಣಗಳು ಕಂಡು ಬಂದರೆ ತಕ್ಷಣ ಸಂಬಂಧ ಪಟ್ಟ ಅಧಿಕಾರಿಗಳು ಆ ಗ್ರಾಮಕ್ಕೆ ಭೇಟಿ ನೀಡಿ ಅಗತ್ಯ ಕ್ರಮ ವಹಿಸಬೇಕು. ತಾಲ್ಲೂಕಿನ ಆಸ್ಪತ್ರೆ ಹಾಗೂ ಕ್ಲಿನಿಕ್ ಗಳಲ್ಲಿ ಕರುಳು ಬೇನೆ ಪ್ರಕರಣಗಳು ಬಂದರೆ ಮಾಹಿತಿ ನೀಡುವಂತೆ ಹಾಗೂ ಆ ಸಂಬಂಧ ಅಗತ್ಯ ಕ್ರಮವಹಿಸಲು ಮುಂದಾಗಬೇಕು ಎಂದು ಅವರು ತಿಳಿಸಿದರು.

ಕುಡಿಯುವ ನೀರು ಸರಬರಾಜಿನ ಕೊಳವೆ ಮಾರ್ಗಗಳು ಒಡೆದು ಹೋದಲ್ಲಿ ತಕ್ಷಣ ದುರಸ್ಥಿಪಡಿಸಲು ಕ್ರಮವಹಿಸಬೇಕು. ನೀರು ಸರಬರಾಜು ಕೊಳವೆ ಮಾರ್ಗದಲ್ಲಿ ಪೈಪ್ ಒಡೆದು ಹೋಗಿದ್ದಲ್ಲಿ, ಹೊರಗಿನ ಇತರೆ ವಸ್ತುಗಳು, ಕೊಳಚೆ ನೀರು ಕುಡಿಯುವ ನೀರಿನ ಸರಬರಾಜಿನ ಪೈಪ್‌ಲೈನ್ ಒಳಗೆ ಹರಿಯದಂತೆ ಕ್ರಮಕೈಗೊಳ್ಳಬೇಕು ಎಂದು ತಿಳಿಸಿದರು.

ಸರ್ಕಾರದ ವಿವಿಧ ಯೋಜನೆಯಡಿ ಕುಡಿಯುವ ನೀರನ್ನು ಸರಬರಾಜು ಮಾಡಲು ನಿರ್ಮಿಸಿರುವ ಓವರ್‌ ಹೆಡ್ ಟ್ಯಾಂಕ್‌ಗಳ ನೀರಿನ ಗುಣಮಟ್ಟದ ಪರೀಕ್ಷೆ ಮಾಡಬೇಕು ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಎಂ.ಗಾಯಿತ್ರಿ ಅವರು ಸ್ವಚ್ಚ ನೀರು, ಸ್ವಚ್ಚ ವಾತಾವರಣ ನೀಡುವುದು  ಅಧಿಕಾರಿಗಳ ಜವಾಬ್ದಾರಿಯಾಗಿದ್ದು ಸಾರ್ವಜನಿಕ ಸ್ಥಳಗಳಲ್ಲಿ ವೆಟ್ ವೆಸ್ಟ್ ಹಾಕಿದಂತೆ ಗಮನಹರಿಸಿ, ಮುಂದೆ ಮಳೆಗಾಲ ಆರಂಭವಾಗುವುದರಿಂದ ಚರಂಡಿ ಸ್ವಚ್ಛ ಗೊಳಿಸಿ ಹಾಗೂ ಗ್ರಾಮಗಳಲ್ಲಿ ಶುಚಿತ್ವದ ಅರಿವು ಮೂಡಿಸುವಂತೆ ತಿಳಿಸಿದರು.

ಸಭೆಯಲ್ಲಿ ಹುಣಸೂರು ಉಪವಿಭಾಗಾಧಿಕಾರಿ ಮಹಮ್ಮದ್ ಹ್ಯಾರಿಸ್ ಸುಮೇರ್ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಹಿಂದಿನ ಲೇಖನವಾಲ್ಮೀಕಿ ನಿಗಮ ಪ್ರಕರಣದಲ್ಲಿ ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ: ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ
ಮುಂದಿನ ಲೇಖನವಾಲ್ಮೀಕಿ ನಿಗಮ ಪ್ರಕರಣ:  ಸಚಿವ ಬಿ. ನಾಗೇಂದ್ರ ಅವರಿಗೆ ಶಿಕ್ಷೆ ಆಗುವವರೆಗೂ ಹೋರಾಟ- ಬಿ ವೈ ವಿಜಯೇಂದ್ರ