ನವದೆಹಲಿ: ದೆಹಲಿ ವಿಧಾನಸಭೆಗೆ ಮೊದಲ ಬಾರಿ ಶಾಸಕಿಯಾಗಿ ಆಯ್ಕೆಯಾಗಿರುವ ರೇಖಾ ಗುಪ್ತಾ ನೂತನ ಮುಖ್ಯಮಂತ್ರಿಯಾಗಿ ಗುರುವಾರ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
32 ವರ್ಷಗಳ ವಿಧಾನಸಭಾ ಇತಿಹಾಸದಲ್ಲಿ ಮುಖ್ಯಮಂತ್ರಿಯಾಗುತ್ತಿರುವ 4ನೇ ಮಹಿಳೆ ಅವರು. ಬಿಜೆಪಿಯ ಸುಷ್ಮಾ ಸ್ವರಾಜ್, ಕಾಂಗ್ರೆಸ್‌ನ ಶೀಲಾ ದೀಕ್ಷಿತ್ ಹಾಗೂ ಎಎಪಿಯ ಆತಿಶಿ ಅವರು ಈ ಹಿಂದೆ ಮುಖ್ಯಮಂತ್ರಿಗಳಾಗಿದ್ದರು.
ಗುರುವಾರ ಮಧ್ಯಾಹ್ನದ ಸುಮಾರಿಗೆ ರಾಮಲೀಲಾ ಮೈದಾನದಲ್ಲಿ ನಡೆಯುವ ಸಮಾರಂಭದಲ್ಲಿ ರೇಖಾ ಅವರು ದೆಹಲಿಯ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಅವರೊಂದಿಗೆ 6 ಸಚಿವರು ಕೂಡ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.
ಚುನಾವಣೆಯಲ್ಲಿ ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರನ್ನು ಸೋಲಿಸಿದ ಪರ್ವೇಶ್ ವರ್ಮಾ, ಬಿಜೆಪಿ ಶಾಸಕರಾದ ಆಶಿಶ್ ಸೂದ್, ಮಂಜಿಂದರ್ ಸಿಂಗ್ ಸಿರ್ಸಾ, ರವೀಂದರ್ ಇಂದ್ರಜ್, ಕಪಿಲ್ ಮಿಶ್ರಾ ಮತ್ತು ಪಂಕಜ್ ಕುಮಾರ್ ಸಿಂಗ್ ಅವರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆಂದು ತಿಳಿದುಬಂದಿದೆ.
1974ರಲ್ಲಿ ಹರಿಯಾಣದ ಜಿಂದ್ ಜಿಲ್ಲೆಯ ನಂದಗಢದಲ್ಲಿ ರೇಖಾ ಗುಪ್ತಾ ಅವರು ಜನಿಸಿದ್ದು, ರೇಖಾ ಅವರ ತಂದೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಬಳಿಕ ರೇಖಾಗೆ ಎರಡು ವರ್ಷವಾದಾಗ ಇವರ ಕುಟುಂಬ ದೆಹಲಿಗೆ ಸ್ಥಳಾಂತರವಾಗಿತ್ತು. ಹೀಗಾಗಿ ದೆಹಲಿಯಲ್ಲೇ ತಮ್ಮ ಪ್ರಾಥಮಿಕ ಹಾಗೂ ಉನ್ನತ ಶಿಕ್ಷಣವನ್ನ ಮುಗಿಸಿದ್ದಾರೆ.
1992ರಲ್ಲಿ ವಿದ್ಯಾಭ್ಯಾಸ ಮಾಡುವಾಗಲೇ ರೇಖಾ ಎಬಿವಿಪಿ ಕಾರ್ಯಕರ್ತೆಯಾಗಿ ಗುರುತಿಸಿಕೊಂಡಿದ್ದರು. ಕಾಲೇಜಿನ ದಿನಗಳಲ್ಲೇ ರಾಜಕೀಯದಲ್ಲಿ ಸಕ್ರಿಯವಾಗಿದ್ದರು. 1996-97ರಲ್ಲಿ ದೆಹಲಿ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದು, ಕಳೆದ 30 ವರ್ಷಗಳಿಂದಲೂ ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದಾರೆ.
ಮೊದಲ ಬಾರಿ 2007 ರಲ್ಲಿ ಉತ್ತರ ಪಿತಂಪುರದಿಂದ ಕೌನ್ಸಿಲರ್ ಆಗಿ ಆಯ್ಕೆಯಾಗಿದ್ದ ರೇಖಾ, ಮೂರು ಬಾರಿ ಕೌನ್ಸಿಲರ್ ಆಗಿ ಸೇವೆ ಸಲ್ಲಿಸಿದ್ದಾರೆ. ಇದೀಗ ಬನಿಯಾ ಸಮುದಾಯಕ್ಕೆ ಸೇರಿದ ರೇಖಾ ಗುಪ್ತಾ ದೆಹಲಿ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ.
ಊಹೆಗೂ ನಿಲುಕದ ರೀತಿಯಲ್ಲಿ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿಯನ್ನ ಆಯ್ಕೆ ಮಾಡಿದೆ. 27 ವರ್ಷಗಳ ಸತತ ಯತ್ನಗಳ ಬಳಿಕ ದೆಹಲಿಯಲ್ಲಿ ಗದ್ದು ಏರಿರುವ ಬಿಜೆಪಿ ರಾಷ್ಟ್ರ ರಾಜಧಾನಿಯಲ್ಲಿ ನಾರಿಶಕ್ತಿಯ ಕೈಗೆ ಆಡಳಿತ ಚುಕ್ಕಾಣಿ ನೀಡಿದೆ.
ಮೋದಿ ನಿರೀಕ್ಷೆಗಳಿಗೆ ತಕ್ಕಂತೆ ನಡೆಯುತ್ತೇನೆ
ಈ ನಡುವೆ ಮುಖ್ಯಮಂತ್ರಿ ಸ್ಥಾನ ಸಿಕ್ಕಿರುವುದಕ್ಕೆ ಸಂತಸ ವ್ಯಕ್ತಪಡಿಸಿರುವ ರೇಖಾ ಗುಪ್ತಾ ಅವರು, ಇದು ಒಂದು ಪವಾಡ ಎನಿಸುತ್ತಿದೆ, ಇದು ಹೊಸ ಪ್ರೇರಣೆ ಮತ್ತು ಹೊಸ ಅಧ್ಯಾಯ. ನಾನು ಮುಖ್ಯಮಂತ್ರಿಯಾಗಲು ಸಾಧ್ಯವಾಗಿದೆ ಎಂದರೆ ಎಲ್ಲಾ ಮಹಿಳೆಯರಿಗೂ ಈ ದಾರಿ ತೆರೆದಿರುತ್ತದೆ ಎಂದೇ ಅರ್ಥ. ಭ್ರಷ್ಟಾಚಾರ ನಡೆಸಿದ ಪ್ರತಿಯೊಬ್ಬರೂ ಪ್ರತಿ ರೂಪಾಯಿಯ ಲೆಕ್ಕವನ್ನು ನೀಡಬೇಕಾಗುತ್ತದೆ ಎಂದು ಹೇಳಿದ್ದಾರೆ.
ಮುಖ್ಯಮಂತ್ರಿ ಸ್ಥಾನ ಒಂದು ದೊಡ್ಡ ಜವಾಬ್ದಾರಿ. ನನ್ನ ಮೇಲೆ ನಂಬಿಕೆ ಇಟ್ಟಿದ್ದಕ್ಕಾಗಿ ಪ್ರಧಾನಿ ಮೋದಿ ಮತ್ತು ಬಿಜೆಪಿ ಹೈಕಮಾಂಡ್‌ಗೆ ಧನ್ಯವಾದ ಹೇಳುತ್ತೇನೆ. ನಾನು ನನ್ನ ಜವಾಬ್ದಾರಿಯನ್ನು ಅತ್ಯಂತ ಪ್ರಾಮಾಣಿಕತೆಯಿಂದ ನಿರ್ವಹಿಸುತ್ತೇನೆ. ನಮ್ಮ ಪಕ್ಷವು ನೀಡಿರುವ ಎಲ್ಲಾ ಭರವಲೆಗಳನ್ನು ಪೂರ್ಣಗೊಳಿಸುವುದು ನನ್ನ ಮೊದಲ ಆದ್ಯತೆಯಾಗಿದೆ, ಎರಡನೇ ಆದ್ಯತೆಯೆಂದರೆ ನಮ್ಮ ಎಲ್ಲಾ 48 ಶಾಸಕರು ಒಂದು ತಂಡವಾಗಿ ಕೆಲಸ ಮಾಡುವುದು. ನಾನು ದೆಹಲಿಯ ಮುಖ್ಯಮಂತ್ರಿಯಾಗುತ್ತೇನೆ ಎಂದು ನಾನು ಎಂದಿಗೂ ಭಾವಿಸಿರಲಿಲ್ಲ… ಹಿಂದಿನ ಭ್ರಷ್ಟ ಸರ್ಕಾರವು ಜನರಿಗೆ ಸೇರಿದ ಪ್ರತಿ ರೂಪಾಯಿಗೂ ಲೆಕ್ಕವನ್ನು ಇದೀಗ ನೀಡಬೇಕಾಗುತ್ತದೆ. ನಾನು ಪ್ರಧಾನಿ ಮೋದಿಯವರ ನಿರೀಕ್ಷೆಗಳಿಗೆ ತಕ್ಕಂತೆ ನಡೆಯುತ್ತೇನೆಂದು ತಿಳಿಸಿದ್ದಾರೆ.
ಏತನ್ಮಧ್ಯೆ, ಮಹಿಳೆಯರಿಗೆ ಮಾಸಿಕ 2,500 ರೂ. ಆರ್ಥಿಕ ನೆರವು ನೀಡುವ ಚುನಾವಣಾ ಭರವಸೆಯನ್ನು ಬಿಜೆಪಿ ಸರ್ಕಾರ ಈಡೇರಿಸಲಿದೆ ಎಂದೂ ಅವರು ಭರವಸೆ ನೀಡಿದರು.
ಆರ್ಥಿಕ ನೆರವಿನ ಮೊದಲ ಕಂತನ್ನು ಮಾರ್ಚ್ 8 ರೊಳಗೆ ಮಹಿಳೆಯರ ಖಾತೆಗಳಿಗೆ ಜಮಾ ಮಾಡಲಾಗುವುದು ಎಂದು ತಿಳಿಸಿದರು.
ಪ್ರಧಾನಿ ಮೋದಿಯವರ ಕನಸನ್ನು ನನಸಾಗಿಸುವುದು ನಮ್ಮ ಎಲ್ಲಾ 48 ಬಿಜೆಪಿ ಶಾಸಕರ ಜವಾಬ್ದಾರಿಯಾಗಿದೆ. ಮಹಿಳೆಯರಿಗೆ ಆರ್ಥಿಕ ನೆರವು ಸೇರಿದಂತೆ ನಮ್ಮ ಎಲ್ಲಾ ಭರವಸೆಗಳನ್ನು ಖಂಡಿತವಾಗಿಯೂ ಈಡೇರಿಸುತ್ತೇವೆ. ಮಾರ್ಚ್ 8 ರೊಳಗೆ ಮಹಿಳೆಯರಿಗೆ ಅವರ ಖಾತೆಗಳಿಗೆ 100 ಪ್ರತಿಶತದಷ್ಟು ಆರ್ಥಿಕ ನೆರವು ನೀಡಲಾಗುವುದು ಎಂದು ಹೇಳಿದ್ದಾರೆ.