ಮನೆ ಕಾನೂನು ರೇಖಾ ಕದಿರೇಶ್ ಹತ್ಯೆ ಪ್ರಕರಣ: 7 ಮಂದಿ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ

ರೇಖಾ ಕದಿರೇಶ್ ಹತ್ಯೆ ಪ್ರಕರಣ: 7 ಮಂದಿ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ

0

ಬೆಂಗಳೂರು: ಬಿಜೆಪಿ ಮಾಜಿ ಕಾರ್ಪೋರೇಟರ್ ರೇಖಾ ಕದಿರೇಶ್ ಹತ್ಯೆ ಪ್ರಕರಣದ 7 ಮಂದಿ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ಇಲ್ಲಿಯ 72ನೇ ಸಿಸಿಹೆಚ್​ ನ್ಯಾಯಾಲಯ ಆದೇಶ ಹೊರಡಿಸಿದೆ.

Join Our Whatsapp Group

ಕಾಟನ್‌ಪೇಟೆಯ ಪೀಟರ್ (46), ಸೂರ್ಯ ಅಲಿಯಾಸ್ ಸೂರಜ್ (20), ಸ್ಟೀಫನ್ (21), ಪುರುಷೋತ್ತಮ್ (22), ಅಜಯ್ (21), ಅರುಣ್‌ಕುಮಾರ್ (36) ಮತ್ತು ಸೆಲ್ವರಾಜ್ ಅಲಿಯಾಸ್ ಬುದಾನ್ (36)ಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.

ಪ್ರಕರಣದ ಮತ್ತೊಬ್ಬ ಆರೋಪಿ, ಕೊಲೆಯಾದ ರೇಖಾ ಕದಿರೇಶ್ ಅತ್ತಿಗೆ ಮಾಲಾ ಮೃತಪಟ್ಟಿದ್ದಾಳೆ. ಆರೋಪಿಗಳು 2021ರ ಜೂನ್‌ನಲ್ಲಿ ಕಚೇರಿ ಬಳಿಯೇ ರೇಖಾ ಕದಿರೇಶ್ ಅವರನ್ನು ಬರ್ಬರವಾಗಿ ಹತ್ಯೆಗೈದು ಪರಾರಿಯಾಗಿದ್ದರು.

ಬಳಿಕ ಪಶ್ಚಿಮ ವಿಭಾಗದ ಅಂದಿನ ಡಿಸಿಪಿ ಸಂಜೀವ್ ಎಂ. ಪಾಟೀಲ್ ನೇತೃತ್ವದಲ್ಲಿ ಕಾಟನ್‌ಪೇಟೆಯ ಠಾಣಾಧಿಕಾರಿ ಚಿದಾನಂದಮೂರ್ತಿ ಹಾಗೂ ತಂಡ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿತ್ತು. ಬಳಿಕ ಆರೋಪಿಗಳ ವಿರುದ್ಧ ಸುಮಾರು 800ಕ್ಕೂ ಹೆಚ್ಚು ಪುಟಗಳ ಆರೋಪಪಟ್ಟಿ ಸಲ್ಲಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಸುದೀರ್ಘ ವಾದ-ಪ್ರತಿವಾದ ಆಲಿಸಿದ ಕೋರ್ಟ್, ಎಲ್ಲಾ 7 ಜನರು ಅಪರಾಧಿಗಳು ಎಂದು ಘೋಷಿಸಿ ಶಿಕ್ಷೆ ಹಾಗೂ ದಂಡ ವಿಧಿಸಿ ಆದೇಶಿಸಿದೆ.

ಸರ್ಕಾರಿ ಅಭಿಯೋಜಕರಾಗಿ ಸತ್ಯವತಿ ವಾದ ಮಂಡಿಸಿದ್ದರು. ವಾದ-ಪ್ರತಿವಾದ ಆಲಿಸಿದ ನ್ಯಾಯಾಧೀಶರಾದ ಬಾಲಚಂದ್ರ ಎನ್. ಭಟ್ ಅವರು ಮಂಗಳವಾರ ಶಿಕ್ಷೆ ಪ್ರಕಟಿಸಿದ್ದಾರೆ.

ಪ್ರಕರಣ ಹಿನ್ನೆಲೆ; 2021 ಜೂನ್ 24ರಂದು ಬೆಳಗ್ಗೆ 10 ಗಂಟೆ ಸುಮಾರಿಗೆ ಕಾಟನ್‌ಪೇಟೆಯ ಆಂಜನಪ್ಪ ಗಾರ್ಡನ್‌ನಲ್ಲಿ ನೆಲೆಸಿದ್ದ ರೇಖಾ ಕದಿರೇಶ್, ಕೋವಿಡ್-19 ಲಾಕ್‌ಡೌನ್ ಹಿನ್ನೆಲೆಯಲ್ಲಿ ಪಕ್ಷದ ಕಚೇರಿ ಬಳಿ ಊಟ ಹಂಚುತ್ತಿದ್ದರು. ಹಣಕಾಸಿನ ವಿಚಾರಕ್ಕೆ ರೇಖಾ ಅವರ ಅತ್ತಿಗೆ ಮಾಲಾ, ಅವರ ಪುತ್ರ ಸೆಲ್ವರಾಜ್ ಸುಫಾರಿ ನೀಡಿದ್ದ ಹಿನ್ನೆಲೆಯಲ್ಲಿ ಇತರ ಅಪರಾಧಿಗಳು ಬಂದು ರೇಖಾ ಕದಿರೇಶ್ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದರು.