ಮನೆ ರಾಜ್ಯ ಬೆಂಗಳೂರಿನ ಮತದಾರರ ಪಟ್ಟಿಯ ಕರಡು ಪ್ರತಿ ಬಿಡುಗಡೆ

ಬೆಂಗಳೂರಿನ ಮತದಾರರ ಪಟ್ಟಿಯ ಕರಡು ಪ್ರತಿ ಬಿಡುಗಡೆ

0

ಬೆಂಗಳೂರು: ಭಾರತ ಚುನಾವಣಾ ಆಯೋಗದ ಸೂಚನೆ ಮೇರೆಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವಿಶೇಷ ಆಯುಕ್ತ ಆರ್ ರಾಮಚಂದ್ರನ್ ಅವರು ಶುಕ್ರವಾರ ಬೆಂಗಳೂರಿನ ಮತದಾರರ ಪಟ್ಟಿಯ ಕರಡು ಪ್ರತಿಯನ್ನು ಬಿಡುಗಡೆ ಮಾಡಿದರು.

ಅದರಂತೆ ನಗರದಲ್ಲಿ ಒಟ್ಟು 97,90,499 ಮತದಾರರಿದ್ದಾರೆ. ಈ ವರ್ಷದ ಜನವರಿ 1 ರಂದು ಒಟ್ಟು ಮತದಾರರ ಸಂಖ್ಯೆ 92,09,917 ಆಗಿದ್ದು, ಈಗ 5,80,582 ಮತದಾರರು ಹೊಸದಾಗಿ ಸೇರ್ಪಡೆಯಾಗಿದ್ದಾರೆ. ಬೂತ್ ಮಟ್ಟದ ಅಧಿಕಾರಿಗಳು ಪ್ರತಿ ಮನೆಗೆ ಭೇಟಿ ನೀಡಿ ಮತದಾರರ ಪಟ್ಟಿಯನ್ನು ಪರಿಶೀಲಿಸಿದ ನಂತರ ಕರಡು ಮತದಾರರ ಪಟ್ಟಿಯನ್ನು ಬಿಡುಗಡೆ ಮಾಡಲಾಯಿತು.

ಬಿಬಿಎಂಪಿ ವ್ಯಾಪ್ತಿಯಲ್ಲಿರುವ 97,90,499 ಮತದಾರರ ಪೈಕಿ 50,61,883 ಪುರುಷ ಮತದಾರರು, 47,26,856 ಮಹಿಳೆಯರು ಮತ್ತು 1760 ಇತರರು ಇದ್ದಾರೆ. ಮತದಾರರ ಸಂಖ್ಯೆ ಹೆಚ್ಚಳದಿಂದಾಗಿ ನಗರದ ಮತಗಟ್ಟೆಗಳ ಸಂಖ್ಯೆ 8,615 ರಿಂದ 8,982 ಕ್ಕೆ ಹೆಚ್ಚಳಗೊಂಡಿವೆ.

2,182 ಮತದಾರರು ಮೃತಪಟ್ಟಿದ್ದು ಅವರನ್ನು ಪಟ್ಟಿಯಿಂದ ತೆರವುಗೊಳಿಸಲಾಗಿದೆ. ಇನ್ನು 82,452 ಜನರು ತಮ್ಮ ಪ್ರಸ್ತುತ ವಿಳಾಸದಿಂದ ಬೇರೆ ಸ್ಥಳಗಳಿಗೆ ಸ್ಥಳಾಂತರಗೊಂಡಿದ್ದು, ಹೀಗಾಗಿ ಹೆಸರನ್ನು ಅಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮತದಾರರ ಪಟ್ಟಿಯಿಂದ ಒಟ್ಟು 86,062 ಹೆಸರುಗಳನ್ನು ಅಳಿಸಲಾಗಿದೆ.

ಬಿಬಿಎಂಪಿ ಬಿಡುಗಡೆ ಮಾಡಿರುವ ಅಂಕಿ ಅಂಶಗಳ ಪ್ರಕಾರ, ಬೆಂಗಳೂರು ನಗರ ಅತಿ ಹೆಚ್ಚು ಅಂದರೆ 37,19,723 ಮತದಾರರನ್ನು ಹೊಂದಿದ್ದರೆ, ಬಿಬಿಎಂಪಿ ಉತ್ತರದಲ್ಲಿ 22,09,318, ಬಿಬಿಎಂಪಿ ದಕ್ಷಿಣದಲ್ಲಿ 20,56,109 ಮತ್ತು ಬಿಬಿಎಂಪಿ ಸೆಂಟ್ರಲ್ 18,05,349 ಮತದಾರರನ್ನು ಹೊಂದಿದೆ.

ಕರಡು ಪಟ್ಟಿಯಲ್ಲಿ ಹೆಸರು ಸೇರಿದಂತೆ ಏನೇ ತಪ್ಪಿದಲ್ಲಿ ಆಕ್ಷೇಪಣೆಗಳನ್ನು ಸಲ್ಲಿಸಲು ಡಿಸೆಂಬರ್ 9 ರವರೆಗೆ ಅವಕಾಶ ನೀಡಲಾಗಿದೆ. ಡಿಸೆಂಬರ್ 26 ರ ಒಳಗೆ ಆಕ್ಷೇಪಣೆಗಳ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು. 2024ರ ವರ್ಷ ಜನವರಿ 5 ರಂದು ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುವುದು. ಮುಂದಿನ ವರ್ಷದ ಆರಂಭದಲ್ಲಿ ನಡೆಯಲಿರುವ ಬಿಬಿಎಂಪಿ ಚುನಾವಣೆಗೂ ಇದೇ ಮತದಾರರ ಪಟ್ಟಿಯನ್ನು ಬಳಸಿಕೊಳ್ಳುವ ನಿರೀಕ್ಷೆಯಿದೆ.

ರಾಜ್ಯದಲ್ಲಿ ಚುನಾವಣಾ ಆಯೋಗ ಬಿಡುಗಡೆ ಮಾಡಿರುವ ಕರಡು ಮತದಾರರ ಪಟ್ಟಿಯಲ್ಲಿ 5,33,77,162 ಮಂದಿ ಇದ್ದಾರೆ. ಇವರಲ್ಲಿ 2,68,02,838 ಪುರುಷರು ಮತ್ತು 2,65,69,428 ಮಹಿಳೆಯರು ಮತ್ತು 4,896 ಇತರರಾಗಿದ್ದಾರೆ.