ಬೆಂಗಳೂರು: ಜನವರಿಯಲ್ಲಿ ನಡೆದಿದ್ದ ಕೆ ಸೆಟ್ ಪರೀಕ್ಷೆಯ ಕೀ ಉತ್ತರಗಳಿಗೆ ಆಕ್ಷೇಪಣೆಗಳನ್ನು ಸ್ವೀಕರಿಸಿದ್ದ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಸಣ್ಣಪುಟ್ಟ ಮಾರ್ಪಾಡುಗಳೊಂದಿಗೆ ಪರಿಷ್ಕೃತ ಕೀ ಉತ್ತರಗಳನ್ನು ಆನ್ ಲೈನ್ ಮೂಲಕ ಬಿಡುಗಡೆ ಮಾಡಿದೆ.
13.01.2024ರಂದು 42 ವಿವಿಧ ವಿಷಯಗಳ ಪತ್ರಿಕೆಗಳಿಗೆ ಪರೀಕ್ಷೆ ನಡೆಲಾಗಿತ್ತು. ಕೀ ಉತ್ತರಗಳನ್ನು ದಿನಾಂಕ 29.01.2024ರಂದು ಪ್ರಕಟಿಸಿ ದಿನಾಂಕ 07.02.2024 ರವರೆಗೆ ಆಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶ ನೀಡಲಾಗಿತ್ತು. ಕೆಲವು ಅಭ್ಯರ್ಥಿಗಳು ಆಕ್ಷೇಪಣೆಗಳನ್ನು ಸಲ್ಲಿಸಲು ಹೆಚ್ಚಿನ ಕಾಲಾವಕಾಶ ಕೋರಿದ ಹಿನ್ನೆಲೆಯಲ್ಲಿ 17.02.2024 ರವರೆಗೆ ದಿನಾಂಕ ವಿಸ್ತರಿಸಲಾಗಿತ್ತು. ಅದರಂತೆ ಪ್ರಾಧಿಕಾರ 23 ಪತ್ರಿಕೆಗಳ ಆಯ್ದ ಕೀ ಉತ್ತರಗಳಿಗೆ ಮಾತ್ರ ಆಕ್ಷೇಪಣೆಗಳನ್ನು ಸ್ವೀಕರಿಸಿತ್ತು. ಒಟ್ಟು 22 ಪತ್ರಿಕೆಗಳ ಕೆಲವು ಕೀ ಉತ್ತರಗಳಿಗೆ ಮಾತ್ರ ವಿಷಯ ತಜ್ಞರು ಬದಲಾವಣೆ ಸೂಚಿಸಿದ್ದಾರೆ.
ಒಂದು ವಿಷಯದ ಪತ್ರಿಕೆಯಲ್ಲಿ ಆಕ್ಷೇಪಣೆಗಳು ಎದುರಾದ ಹಿನ್ನೆಲೆಯಲ್ಲಿ ಯಾವುದೇ ಬದಲಾವಣೆ ಸೂಚಿಸಿಲ್ಲ. ಉಳಿದ 19 ಪತ್ರಿಕೆಗಳಿಗೆ ಸಂಬಂಧಿಸಿದಂತೆ ಯಾವುದೇ ಆಕ್ಷೇಪಣೆಗಳು ಸ್ವೀಕೃತವಾಗದ ಕಾರಣ ಕೀ ಉತ್ತರಗಳಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಆಕ್ಷೇಪಣೆಗಳು ಸ್ವೀಕೃತವಾದ 23 ಪತ್ರಿಕೆಗಳಿಗೆ ಸಂಬಂಧಪಟ್ಟ ಪ್ರಶ್ನೆಗಳನ್ನು ವಿಷಯ ತಜ್ಞರ ಸಮಿತಿಗಳ ಮೂಲಕ ಪರಿಶೀಲಿಸಲಾಗಿದೆ.
ಅವುಗಳಲ್ಲಿ ಮನಃಶಾಸ್ತ್ರ ವಿಷಯವನ್ನು ಹೊರತುಪಡಿಸಿ ಉಳಿದ 22 ಪತ್ರಿಕೆಗಳಲ್ಲಿ ವಿಷಯ ತಜ್ಞರ ಸಮಿತಿಗಳು ನೀಡಿದ ಶಿಫಾರಸಿನಂತೆ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ.