ನವದೆಹಲಿ : ಕೇಂದ್ರ ಸರ್ಕಾರ ಆಮದು ಮಾಡಿಕೊಂಡ ಪೆಟ್ರೋಕೆಮಿಕಲ್ ಉತ್ಪನ್ನಗಳ ಮೇಲಿನ ಕಸ್ಟಮ್ಸ್ ಸುಂಕವನ್ನು ಸಂಪೂರ್ಣವಾಗಿ ಮನ್ನಾ ಮಾಡಿದೆ. ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷದಿಂದ ಉಂಟಾದ ಪೂರೈಕೆ ವ್ಯತ್ಯಯ ಮತ್ತು ಬೆಲೆ ಏರಿಕೆಯನ್ನು ನಿಯಂತ್ರಿಸಲು ಈ ಮಹತ್ವದ ಕ್ರಮ ಕೈಗೊಳ್ಳಲಾಗಿದೆ.
ಸರ್ಕಾರ ಆಯ್ದ 40 ಪ್ರಮುಖ ಪೆಟ್ರೋಕೆಮಿಕಲ್ ಉತ್ಪನ್ನಗಳ ಮೇಲೆ ಶೂನ್ಯ ಸುಂಕವನ್ನು ವಿಧಿಸಿದೆ. ಈ ವಿನಾಯಿತಿ ಏಪ್ರಿಲ್ 2 ರಿಂದ ಜೂನ್ 30 ರವರೆಗೆ ಮಾತ್ರ ಜಾರಿಯಲ್ಲಿರುತ್ತದೆ. ಮೆಥನಾಲ್, ಟೊಲ್ಯೂನ್, ಸ್ಟೈರೀನ್, ವಿನೈಲ್ ಕ್ಲೋರೈಡ್ ಮೊನೊಮರ್, ಅಸಿಟಿಕ್ ಆಸಿಡ್, ಪಿವಿಸಿ ಮತ್ತು ಪಾಲಿಥಿಲಿನ್ನಂತಹ ಪಾಲಿಮರ್ಗಳು ಈ ಪಟ್ಟಿಯಲ್ಲಿವೆ. ಅಮೋನಿಯಂ ನೈಟ್ರೇಟ್ ಮೇಲಿನ ಕೃಷಿ ಮೂಲಸೌಕರ್ಯ ಮತ್ತು ಅಭಿವೃದ್ಧಿ ಸೆಸ್ ಅನ್ನು ಶೂನ್ಯಕ್ಕೆ ಇಳಿಸಲಾಗಿದೆ.
ಪ್ಲಾಸ್ಟಿಕ್, ಪ್ಯಾಕೇಜಿಂಗ್, ಜವಳಿ, ಔಷಧ ಮತ್ತು ಆಟೋಮೊಬೈಲ್ ಬಿಡಿಭಾಗಗಳ ತಯಾರಿಕಾ ವಲಯಗಳಿಗೆ ಕಚ್ಚಾ ವಸ್ತುಗಳ ವೆಚ್ಚ ಕಡಿಮೆಯಾಗಲಿದೆ. ಕಚ್ಚಾ ವಸ್ತುಗಳ ಬೆಲೆ ಇಳಿಕೆಯಾದಾಗ ಅಂತಿಮ ಉತ್ಪನ್ನಗಳ ಬೆಲೆಯೂ ತಗ್ಗಲಿದ್ದು ಗ್ರಾಹಕರಿಗೆ ಪರೋಕ್ಷವಾಗಿ ಸಹಕಾರಿಯಾಗಲಿದೆ. ಸುಂಕ ಕಡಿತ ಮಾಡುವುದರಿಂದ ನಮ್ಮ ದೇಶದ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಕಚ್ಚಾ ವಸ್ತುಗಳು ಕಡಿಮೆ ಬೆಲೆಯಲ್ಲಿ ಸಿಗಲಿದೆ.
ಯಾವೆಲ್ಲಾ ಉತ್ಪನ್ನಗಳ ಮೇಲೆ ಪರಿಣಾಮ? –
PVC (Polyvinyl Chloride) : ಪೈಪ್ಗಳು, ವೈರ್ಗಳು ಮತ್ತು ವೈದ್ಯಕೀಯ ಉಪಕರಣಗಳ ತಯಾರಿಕೆಗೆ ಬೇಕಾಗುತ್ತದೆ.
Methanol & Acetic Acid : ಪೇಂಟ್ ಮತ್ತು ಪ್ಲಾಸ್ಟಿಕ್ ಕೈಗಾರಿಕೆಗಳಲ್ಲಿ ಇವು ಅತ್ಯಗತ್ಯ.
Styrene & Phenol : ಆಟೋಮೊಬೈಲ್ ಬಿಡಿಭಾಗಗಳು ಮತ್ತು ಎಲೆಕ್ಟ್ರಾನಿಕ್ ವಸ್ತುಗಳ ತಯಾರಿಕೆಯಲ್ಲಿ ಬಳಕೆ.
ಏನಿದು ಕಸ್ಟಮ್ಸ್ ಸುಂಕ? – ಒಂದು ದೇಶದಿಂದ ಮತ್ತೊಂದು ದೇಶಕ್ಕೆ ವಸ್ತುಗಳನ್ನು ಆಮದು ಮಾಡುವಾಗ ಅಥವಾ ರಫ್ತು ಮಾಡುವಾಗ ಸರ್ಕಾರ ವಿಧಿಸುವ ತೆರಿಗೆಯನ್ನು ಕಸ್ಟಮ್ಸ್ ಸುಂಕ ಎನ್ನಲಾಗುತ್ತದೆ. ಇದು ಸರ್ಕಾರದ ಆದಾಯದ ಪ್ರಮುಖ ಮೂಲಗಳಲ್ಲಿ ಒಂದಾಗಿದೆ. ವಿದೇಶಿ ವಸ್ತುಗಳು ಅಗ್ಗದ ಬೆಲೆಗೆ ಬಂದು ಭಾರತದ ಸ್ಥಳೀಯ ಮಾರುಕಟ್ಟೆಯನ್ನು ಹಾಳುಮಾಡದಂತೆ ತಡೆಯಲು ಸರ್ಕಾರ ಕಸ್ಟಮ್ಸ್ ಸುಂಕವನ್ನು ವಿಧಿಸುತ್ತದೆ.















