ನವದೆಹಲಿ : ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಮತ್ತು ಇತರರಿಗೆ ಬಿಗ್ ರಿಲೀಫ್ ಸಿಕ್ಕಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಸಲ್ಲಿಸಿದ ಚಾರ್ಜ್‌ಶೀಟ್ ಅನ್ನು ಪರಿಗಣನೆಗೆ ತೆಗೆದುಕೊಳ್ಳಲು ದೆಹಲಿ ನ್ಯಾಯಾಲಯ ನಿರಾಕರಿಸಿದೆ.
ನ್ಯಾಷನಲ್ ಹೆರಾಲ್ಡ್‌ಗೆ ಸಂಬಂಧಿಸಿದ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಸಲ್ಲಿಸಿದ ಚಾರ್ಜ್‌ಶೀಟ್ ಅನ್ನು ಪರಿಗಣಿಸುವ ಕುರಿತು ರೌಸ್ ಅವೆನ್ಯೂ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಲಾಯಿತು. ವಿಶೇಷ ನ್ಯಾಯಾಧೀಶರಾದ ವಿಶಾಲ್ ಗೋಗ್ನೆ ಅವರು, ಜಾರಿ ನಿರ್ದೇಶನಾಲಯ ಸಲ್ಲಿಸಿದ ದೂರು, ತನಿಖಾ ವರದಿಯ ಆಧಾರದ ಮೇಲೆ ಇಲ್ಲದೆ, ಖಾಸಗಿ ದೂರಿನ ಮೇಲೆ ಆಧರಿತವಾಗಿರುವುದರಿಂದ ಅದು ಸ್ವೀಕಾರಾರ್ಹವಲ್ಲ ಎಂದು ಅಭಿಪ್ರಾಯಪಟ್ಟರು.
ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ ಅಡಿಯಲ್ಲಿ ಸಲ್ಲಿಸಲಾದ ಈ ದೂರು ನ್ಯಾಯಾಲಯದಲ್ಲಿ ಮುಂದುವರಿಯಲು ಅರ್ಹತೆ ಹೊಂದಿಲ್ಲ ಎಂದು ಸ್ಪಷ್ಟಪಡಿಸಿದರು. ಅಲ್ಲದೇ ಇ.ಡಿ ತನ್ನ ತನಿಖೆಯನ್ನು ಮುಂದುವರಿಸಬಹುದು ಎಂದು ನ್ಯಾಯಾಲಯ ಹೇಳಿದೆ.
ಈ ಪ್ರಕರಣವು ರಾಷ್ಟ್ರೀಯ ಹೆರಾಲ್ಡ್ ಪತ್ರಿಕೆಯ ಮಾಲೀಕತ್ವಕ್ಕೆ ಸಂಬಂಧಿಸಿದಂತೆ ಉದ್ಭವಿಸಿತ್ತು. ಜಾರಿ ನಿರ್ದೇಶನಾಲಯ ಈ ಪ್ರಕರಣದಲ್ಲಿ ಹಣ ಅಕ್ರಮ ವರ್ಗಾವಣೆ ನಡೆದಿದೆ ಎಂದು ಆರೋಪಿಸಿತ್ತು. ಆದರೆ, ನ್ಯಾಯಾಲಯವು ದೂರಿನ ಮೂಲವನ್ನು ಪ್ರಶ್ನಿಸಿ, ಅದನ್ನು ಸ್ವೀಕರಿಸಲು ನಿರಾಕರಿಸಿದೆ.
ಈ ಪ್ರಕರಣವು ಸುಬ್ರಮಣಿಯನ್ ಸ್ವಾಮಿ ಅವರು ಸಲ್ಲಿಸಿದ್ದ ಖಾಸಗಿ ದೂರಿನಿಂದ ಆರಂಭವಾಗಿತ್ತು. ಎಫ್‌ಐಆರ್ ದಾಖಲಿಸದೆ ಖಾಸಗಿ ದೂರಿನ ಆಧಾರದ ಮೇಲೆ ಇಡಿ ತನಿಖೆ ನಡೆಸಿತ್ತು. ಆದರೆ, ನ್ಯಾಯಾಲಯವು ಎಫ್‌ಐಆರ್ ಇಲ್ಲದೆ ಖಾಸಗಿ ದೂರಿನ ಮೇಲೆ ಆರೋಪ ಪಟ್ಟಿ ಸ್ವೀಕರಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.
ಗಾಂಧಿ ಕುಟುಂಬದವರಲ್ಲದೆ, ಸುಮನ್ ದುಬೆ, ಸ್ಯಾಮ್ ಪಿತ್ರೋಡಾ, ಯಂಗ್ ಇಂಡಿಯನ್, ಡೋಟೆಕ್ಸ್ ಮರ್ಚಂಡೈಸ್ ಮತ್ತು ಸುನಿಲ್ ಭಂಡಾರಿ ಅವರನ್ನೂ ಇಡಿ ಆರೋಪಿಗಳನ್ನಾಗಿ ಮಾಡಿತ್ತು. ಸದ್ಯ ಇವರೆಲ್ಲರಿಗೂ ರಿಲೀಫ್ ಸಿಕ್ಕಿದೆ.














