ಬೆಂಗಳೂರು: ಸರ್ಕಾರಿ ವಸತಿ ಶಾಲೆ ಮತ್ತು ಕಾಲೇಜುಗಳಲ್ಲಿ ಧಾರ್ಮಿಕ ಹಬ್ಬಗಳನ್ನು ಆಚರಣೆ ಮಾಡಬಾರದು ಎಂದು ರಾಜ್ಯ ಸರ್ಕಾರ ಗುರುವಾರ ಆದೇಶ ಹೊರಡಿಸಿದೆ.
ನಿಗದಿತ ರಾಷ್ಟ್ರೀಯ ಹಬ್ಬ, ನಾಡಹಬ್ಬ ಮತ್ತು ಜಯಂತಿಗಳನ್ನು ಆಚರಿಸಬಹುದು. ಅದು ಹೊರತುಪಡಿಸಿ ಧಾರ್ಮಿಕ ಹಬ್ಬಗಳನ್ನು ಆಚರಿಸಬಾರದು ಎಂದು ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಸುತ್ತೋಲೆ ಹೊರಡಿಸಿದೆ. ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘವು ರಾಜ್ಯ ಸರ್ಕಾರದ ಅಂಗ ಸಂಸ್ಥೆಯಾಗಿದೆ.
ಸಮಾಜ ಕಲ್ಯಾಣ ಸಚಿವ ಹೆಚ್ ಸಿ ಮಹದೇವಪ್ಪ ಅವರ ಸೂಚನೆ ಮೇರೆಗೆ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಸುತ್ತೋಲೆ ಹೊರಡಿಸಿದೆ. ಅದರಂತೆ, 10 ಅನುಮೋದಿತ ರಾಷ್ಟ್ರೀಯ ಹಬ್ಬಗಳನ್ನು ಮಾತ್ರ ಶಾಲೆ, ಕಾಲೇಜುಗಳಲ್ಲಿ ಆಚರಿಸಬಹುದು. ಧಾರ್ಮಿಕ ಹಬ್ಬ ಆಚರಿಸಿದರೆ ಪ್ರಾಂಶುಪಾಲರು, ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಸುತ್ತೋಲೆಯಲ್ಲಿ ಎಚ್ಚರಿಕೆ ನೀಡಲಾಗಿದೆ.
ಯುಗಾದಿ, ರಂಜಾನ್, ಕ್ರಿಸ್ಮಸ್, ಈದ್ ಮಿಲಾದ್, ಸಂಕ್ರಾತಿ ಸೇರಿದಂತೆ ಯಾವುದೇ ಧಾರ್ಮಿಕ ಹಬ್ಬಗಳನ್ನು ಶಾಲೆ ಮತ್ತು ಕಾಲೇಜುಗಳಲ್ಲಿ ಆಚರಿಸುವಂತಿಲ್ಲ ಎಂದು ಸುತ್ತೋಲೆಯಲ್ಲಿ ಉಲ್ಲೇಖಿಸಲಾಗಿದೆ.
ಖಾಸಗಿ ಶಾಲೆಗಳಿಗೆ ಅನ್ವಯವಾಗುವುದಿಲ್ಲ
ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವ್ಯಾಪ್ತಿಯಲ್ಲಿ ಬರುವ ಎಲ್ಲಾ ವಸತಿ ಶಾಲೆ ಮತ್ತು ಕಾಲೇಜುಗಳಿಗೆ ಈ ಸುತ್ತೋಲೆ ಅನ್ವಯವಾಗುತ್ತದೆ ಎಂದು ಉಲ್ಲೇಖಿಸಲಾಗಿದೆ. ಹೀಗಾಗಿ ರಾಜ್ಯದ ಖಾಸಗಿ ಶಾಲೆ, ಕಾಲೇಜುಗಳಿಗೆ ಸುತ್ತೋಲೆಯು ಅನ್ವಯವಾಗುವುದಿಲ್ಲ ಎನ್ನಲಾಗಿದೆ.
ಸುತ್ತೋಲೆಯಲ್ಲೇನಿದೆ?
ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವ್ಯಾಪ್ತಿಯಲ್ಲಿ ಬರುವ ಎಲ್ಲಾ ವಸತಿ ಶಾಲೆ ಹಾಗೂ ಕಾಲೇಜುಗಳಲ್ಲಿ ಸರ್ಕಾರದ ಸೂಚನೆಯಂತೆ ರಾಷ್ಟ್ರೀಯ ಹಬ್ಬಗಳನ್ನು ಮಾತ್ರ ಆಚರಣೆ ಮಾಡಬೇಕಾಗಿರುತ್ತದೆ. ಆದರೆ ಕೆಲವು ರಾಷ್ಟ್ರೀಯ ಹಬ್ಬಗಳಲ್ಲದೇ ಇತರೆ ಧಾರ್ಮಿಕ ಹಬ್ಬಗಳಾದ ಯುಗಾದಿ, ರಂಜಾನ್, ಕ್ರಿಸ್ಮಸ್, ಈದ್ ಮಿಲಾದ್, ಸಂಕ್ರಾಂತಿ ಇತರೆ ಹಬ್ಬಗಳನ್ನು ಆಚರಣೆ ಮಾಡುತ್ತಿರುವುದು ಗಮನಕ್ಕೆ ಬಂದಿರುತ್ತದೆ. ಆದ್ದರಿಂದ ಮಾನ್ಯ ಸಚಿವರು, ಸಮಾಜ ಕಲ್ಯಾಣ ಇಲಾಖೆ ಅವರು ಉಲ್ಲೇಖಿತ ಟಿಪ್ಪಣಿಯಲ್ಲಿ ಅನುಮೋದಿಸಿರುವಂತೆ ಸಂಘದ ವ್ಯಾಪ್ತಿಯಲ್ಲಿ ಬರುವ ಎಲ್ಲಾ ವಸತಿ ಶಾಲೆ ಹಾಗೂ ಕಾಲೇಜುಗಳಲ್ಲಿ ಈ ಕೆಳಕಂಡ ರಾಷ್ಟ್ರೀಯ ಹಬ್ಬ, ನಾಡಹಬ್ಬ ಮತ್ತು ಜಯಂತಿಗಳನ್ನು ಮಾತ್ರ ಆಚರಿಸಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಯಾವೆಲ್ಲ ರಾಷ್ಟ್ರೀಯ ಹಬ್ಬಗಳನ್ನು ಆಚರಿಸಬಹುದು?
ಗಣರಾಜ್ಯೋತ್ಸವ
ಸ್ವಾತಂತ್ರ ದಿನಾಚರಣೆ
ಮಹಾತ್ಮ ಗಾಂಧಿ ಜಯಂತಿ
ಕನ್ನಡ ರಾಜ್ಯೋತ್ಸವ
ಡಾ.ಬಿ.ಆರ್. ಅಂಬೇಡ್ಕರ್ ಜಯಂತಿ
ವಾಲ್ಮೀಕಿ ಜಯಂತಿ
ಕನಕದಾಸ ಜಯಂತಿ
ಬಸವ ಜಯಂತಿ
ಸಂವಿಧಾನ ದಿನಾಚರಣೆ
ಯೋಗ ದಿನಾಚರಣೆ