ಹಾಸನ(Hassan); ಜಿಲ್ಲಾ ಕೇಂದ್ರದಲ್ಲಿರುವ ಹಳೆ ತಾಲ್ಲೂಕು ಕಚೇರಿ ತೆರವು ಕಾರ್ಯಾಚರಣೆ ಕಾನೂನು ಬದ್ಧವಾಗಿಯೇ ನಡೆದಿದೆ ಎಂದು ಜಿಲ್ಲಾ ಉಸ್ತುವಾರಿ ಮತ್ತು ಅಬಕಾರಿ ಸಚಿವ ಕೆ.ಗೋಪಾಲಯ್ಯ ಸ್ಪಷ್ಟ ಪಡಿಸಿದರು.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ತೆರವು ಕಾರ್ಯಾಚರಣೆ ಮತ್ತು ಹೊಸ ಕಟ್ಟಡ ನಿರ್ಮಾಣಕ್ಕೆ ಈ ಹಿಂದೆಯೇ ನಿರ್ಧಾರ ಮಾಡಲಾಗಿತ್ತು.ಇದು 60 ವರ್ಷ ಪೂರೈಸಿದ ಕಟ್ಡಡವಾಗಿತ್ತಲ್ಲದೆ ಸಾಕಷ್ಟು ಶಿಥಿಲಗೊಂಡಿತ್ತು. ಈ ಹಿನ್ನೆಲೆಯಲ್ಲಿ ತೆರವು ಮಾಡಲಾಯಿತು ಎಂದರು.
ಟ್ರಾಫಿಕ್ ಸಮಸ್ಯೆಯನ್ನು ಮನಗಂಡು ರಾತ್ರಿ ವೇಳೆಯಲ್ಲಿ ಕಟ್ಟಡ ತೆರವು ಮಾಡಲಾಗಿದೆಯೇ ಹೊರತು ಇದರಲ್ಲಿ ಬೇರೆ ಉದ್ದೇಶಗಳಿಲ್ಲ. ಘಟನೆಗಳ ಕುರಿತು ಕಂದಾಯ ಸಚಿವರ ಜೊತೆ ಮಾತನಾಡಲಾಗಿದೆ. ಈ ಬಗ್ಗೆ ಸರಿಯಾದ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.
ಈ ವಿಚಾರದಲ್ಲಿ ಘಟನೆ ಜಾಗದಲ್ಲಿ 144 ಸೆಕ್ಷನ್ ಅನ್ವಯ ನಿಷೇದಾಜ್ಞೆ ಜಾರಿಮಾಡಲಾಗಿದೆ.ಈ ಬಗ್ಗೆ ಸಿಎಂ ಮತ್ತು ಕಂದಾಯ ಸಚಿವರ ಜೊತೆ ಕುಳಿತು ಚರ್ಚೆ ಮಾಡಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು. ಸದರಿ ಪ್ರಕರಣವನ್ನು ಯಾರೂ ಕೂಡ ವೈಯಕ್ತಿಕವಾಗಿ ಪರಿಗಣಿಸಬಾರದು. ಇದು ಸಾರ್ವಜನಿಕರ ಪರವಾಗಿ ಮಾಡುತ್ತಿರುವ ಕೆಲಸ. ಜನರಿಗೆ ಒಳಿತು ಮಾಡುವ ಉದ್ದೇಶದಿಂದ ಸರ್ಕಾರ ಕೈಗೊಂಡಿರುವ ಕೆಲಸ ಈ ಸಮಸ್ಯೆ ಏನೇ ಇದ್ದರೂ ಬಗೆಹರಿಸಲಾಗುವುದು ಎಂದು ಸಚಿವ ಕೆ.ಗೋಪಾಲಯ್ಯ ತಿಳಿಸಿದರು.