ಮುಂಬೈ : ಪಶ್ಚಿಮ ಘಟ್ಟಗಳ ಸಂರಕ್ಷಣಾ ವರದಿಯನ್ನು ರಚಿಸಿದ್ದ ಹಿರಿಯ ಪರಿಸರ ವಿಜ್ಞಾನಿ, ಪರಿಸರವಾದಿ ಮತ್ತು ಬರಹಗಾರ ಡಾ. ಮಾಧವ ಗಾಡ್ಗೀಳ್ (83) ನೆನ್ನೆ (ಬುಧವಾರ) ರಾತ್ರಿ ಪುಣೆಯಲ್ಲಿ ನಿಧನರಾದರು.
ಮಾಧವ ಗಾಡ್ಗೀಳ್ ಅವರು ಪ್ರಧಾನ ಮಂತ್ರಿಗಳ ವೈಜ್ಞಾನಿಕ ಸಲಹಾ ಮಂಡಳಿಯ ಮಾಜಿ ಸದಸ್ಯರಾಗಿದ್ದರು ಮತ್ತು 2010 ರ ಪಶ್ಚಿಮ ಘಟ್ಟಗಳ ಪರಿಸರ ವಿಜ್ಞಾನ ತಜ್ಞರ ಸಮಿತಿ ಮುಖ್ಯಸ್ಥರಾಗಿದ್ದರು. ಇವರು ಅಧ್ಯಯನ ನಡೆಸಿ ತಯಾರಿಸಿದ್ದ ವರದಿಯನ್ನು ಗಾಡ್ಗೀಳ್ ಆಯೋಗದ ವರದಿ ಎಂದೇ ಕರೆಯಲಾಗುತ್ತಿತ್ತು.
1942 ರ ಮೇ 24 ರಂದು ಪುಣೆಯಲ್ಲಿ ಜನಿಸಿದ ಇವರು ಪುಣೆಯ ಫರ್ಗುಸನ್ ಕಾಲೇಜಿನಿಂದ ಬಿಎಸ್ಸಿ (ಪ್ರಾಣಿಶಾಸ್ತ್ರ) ಪದವಿ ಪಡೆದು 1965 ರಲ್ಲಿ ಅವರು ಹಾರ್ವರ್ಡ್ ವಿಶ್ವವಿದ್ಯಾಲಯದಿಂದ ಎಂಎಸ್ಸಿ ಪಡೆದು 1969 ರಲ್ಲಿ ಹಾರ್ವರ್ಡ್‌ನಿಂದ ಜೀವಶಾಸ್ತ್ರದಲ್ಲಿ ಪಿಎಚ್‌ಡಿ ಪದವಿ ಪಡೆದ್ದರು.
ಭಾರತಕ್ಕೆ 1971 ರಲ್ಲಿ ಮರಳಿದ ಬಳಿಕ 1973 ರಲ್ಲಿ ಬೆಂಗಳೂರಿನಲ್ಲಿರುವ ಭಾರತೀಯ ವಿಜ್ಞಾನ ಸಂಸ್ಥೆಯನ್ನು ಸೇರಿ 2004 ರಲ್ಲಿ ಅಧ್ಯಕ್ಷರಾಗುವ ಮೂಲಕ ಮಾರು 30 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು.
ಡಾ. ಗಾಡ್ಗೀಳ್ ಅವರು ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿಯ ಸದಸ್ಯರಾಗಿ, ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಸದಸ್ಯರಾಗಿ ಮತ್ತು ರಾಷ್ಟ್ರೀಯ ಸಲಹಾ ಮಂಡಳಿಯ ದಸ್ಯರಾಗಿ ಸೇರಿದಂತೆ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.
ಕ್ರೀಡಾ ಪಟುವಾಗಿದ್ದ ಮಾಧವ ಗಾಡ್ಗೀಳ್ 1959 ಮತ್ತು 1961 ರಲ್ಲಿ ಮಹಾರಾಷ್ಟ್ರ ರಾಜ್ಯ ಜ್ಯೂ ನಿಯರ್ ಮತ್ತು ಪುಣೆ ವಿಶ್ವವಿದ್ಯಾಲಯದ ಹೈಜಂಪ್‌ನಲ್ಲಿ ದಾಖಲೆ ನಿರ್ಮಿಸಿದ್ದರು. ಅವರು ಅಖಿಲ ಭಾರತ ವಿಶ್ವವಿದ್ಯಾಲಯದ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಪುಣೆ ವಿಶ್ವವಿದ್ಯಾಲಯವನ್ನು ಪ್ರತಿನಿಧಿಸಿದ್ದರು.















