ಬೆಂಗಳೂರು: ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರನ್ನು ಸೈಡ್‍ಲೈನ್ ಮಾಡಿ ತಾನು ಮುಖ್ಯಮಂತ್ರಿ ಆಗಬೇಕೆಂಬ ಆಕಾಂಕ್ಷೆಯಿಂದ ಪಕ್ಷವನ್ನು ನಾಶ ಮಾಡುತ್ತಿದ್ದಾರೆಂದು ಬಿಜೆಪಿ ನಾಯಕ ಬಿ.ಎಲ್.ಸಂತೋಷ್ ವಿರುದ್ಧ ಮಾಜಿ ಶಾಸಕ ಎಂ.ಪಿ.ರೇಣುಕಾಚಾರ್ಯ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಶುಕ್ರವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬಿಜೆಪಿಯಲ್ಲಿ ವರ್ಚಸ್ಸು ಇರುವವರನ್ನು ಬೆಳೆಯಲು ಬಿಡುತ್ತಿಲ್ಲ. ಇದು ಪಕ್ಷಕ್ಕೆ ಶಾಪ ಆಗಿದೆ. ನಿನ್ನೆ ಬೆಂಗಳೂರಿನಲ್ಲಿ ನಡೆದ ಬಿಜೆಪಿ ಸಭೆಯಲ್ಲಿ ಯಡಿಯೂರಪ್ಪ, ಬೊಮ್ಮಾಯಿ ಅಂತಹ ನಾಯಕರು ಇರಬೇಕಾಗಿತ್ತು. ಯಡಿಯೂರಪ್ಪ ಅವರನ್ನು ಸೈಡ್ ಲೈನ್ ಮಾಡಿದರು. ಯಡಿಯೂರಪ್ಪ ಅನುಪಸ್ಥಿತಿಯಲ್ಲಿ ಬಿ.ಎಲ್.ಸಂತೋಷ್ ಲೋಕಸಭಾ ಚುನಾವಣೆ ಪೂರ್ವಸಿದ್ಧತಾ ಸಭೆ ಮಾಡಿರುವುದು ಸರಿಯಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ರಾಜ್ಯದಲ್ಲಿ ಬಿಜೆಪಿ ಸೋಲಿಗೆ ಯಡಿಯೂರಪ್ಪ ಶಾಪ ಕಾರಣ. ನಿನ್ನೆ ಸಭೆ ಮಾಡಿದವರು ಬಿಜೆಪಿ ಕಟ್ಟಿ ಬೆಳೆಸಿದವರಲ್ಲ. ಅವರು ಸಂಘ ಪರಿವಾರದಿಂದ ಬಂದವರು. ಅವರಿಗೆ ತಾನು ಮುಖ್ಯಮಂತ್ರಿ ಆಗಬೇಕು ಅಂತ ಇದೆ. ಇಡೀ ಪಕ್ಷವನ್ನು ಕಂಟ್ರೋಲ್ ಮಾಡುತ್ತಿದ್ದಾರೆ. ಅವರ ಪರವಾಗಿ ಒಂದು ಗ್ಯಾಂಗ್ ಇದೆ. ಅವರು ಯಾರೂ ಜನರಿಂದ ಆಯ್ಕೆಯಾದವರಲ್ಲ. ಪಕ್ಷ ಕಟ್ಟಿದವರಲ್ಲ ಎಂದು ರೇಣುಕಾಚಾರ್ಯ ಕಿಡಿಕಾರಿದರು.
ಬಿಜೆಪಿಯ ಲಿಂಗಾಯತ ನಾಯಕರನ್ನೆಲ್ಲ ಮುಗಿಸಿದರು. ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಈಶ್ವರಪ್ಪ, ಲಕ್ಷ್ಮಣ ಸವದಿಗೆ ಟಿಕೆಟ್ ಕೊಡಲಿಲ್ಲ. ಏಳೆಂಟು ಜನರ ಗುಂಪು ಕಟ್ಟಿಕೊಂಡು ಜೀ ಅಂದವರಿಗೆ ಮಾತ್ರ ಅಲ್ಲಿ ಬೆಲೆ. ಸಂಘಟನೆ ನಿಮ್ಮಿಂದ ಹಾಳಾಗಿದೆ. ಬಿಜೆಪಿ ಹೀನಾಯ ಸೋಲಿಗೆ ನೀವೇ ಕಾರಣ ಎಂದು ಬಹಿರಂಗವಾಗಿ ಕೆಂಡಕಾರಿದರು.