ಬೆಂಗಳೂರು: ರೇಣುಕಾಸ್ವಾಮಿ ಪ್ರಕರಣದಲ್ಲಿ ಸಂಬಂಧ ಜೈಲಿನಲ್ಲಿರುವ ನಟ ದರ್ಶನ್ ಹಾಗೂ ಇತರೆ ಆರೋಪಿಗಳ ನ್ಯಾಯಾಂಗ ಬಂಧನದ ಅವಧಿಯನ್ನು ಬುಧವಾರ(ಆ.14ರಂದು) ಮತ್ತೆ ವಿಸ್ತರಣೆ ಮಾಡಲಾಗಿದೆ.
ಪರಪ್ಪನ ಅಗ್ರಹಾರ ಜೈಲಿನಿಂದ 13 ಮಂದಿ , ತುಮಕೂರು ಜೈಲಿನಿಂದ 4 ಆರೋಪಿಗಳನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಕೋರ್ಟಿಗೆ ಹಾಜರುಪಡಿಸಲಾಗಿತ್ತು.
ಬೆಂಗಳೂರಿನ 24ನೇ ಎಸಿಎಂಎಂ ಕೋರ್ಟಿನಲ್ಲಿ ವಿಚಾರಣೆ ನಡೆಸಿ ನ್ಯಾಯಾಧೀಶ ವಿಶ್ವನಾಥ್ ಸಿ ಗೌಡರ್ ಅವರು ಆ.28ರವರೆಗೆ ಎಲ್ಲಾ ಆರೋಪಿಗಳ ನ್ಯಾಯಾಂಗ ಬಂಧನದ ಅವಧಿಯನ್ನು ವಿಸ್ತರಣೆ ಮಾಡಿ ಆದೇಶಿಸಿದ್ದಾರೆ.
ದರ್ಶನ್ ರನ್ನು ಭೇಟಿಯಾದ ಅಭಿಷೇಕ್ ಅಂಬರೀಷ್: ಜೈಲು ಸೇರಿರುವ ನಟ ದರ್ಶನ್ರನ್ನು ಚಿತ್ರರಂಗದ ಕಲಾವಿದರು ಹಾಗೂ ಅವರ ಸ್ನೇಹಿತರು ಭೇಟಿ ಆಗುತ್ತಿದ್ದಾರೆ. ಬುಧವಾರ(ಆ.14ರಂದು) ಅಭಿಷೇಕ್ ಅಂಬರೀಷ್, ಧನ್ವೀರ್ ಹಾಗೂ ಚಿಕ್ಕಣ್ಣ ಭೇಟಿಯಾಗಿ ದರ್ಶನ್ ಅವರಲ್ಲಿ ಎಲ್ಲವೂ ಸರಿ ಆಗುತ್ತದೆನ್ನುವ ಧೈರ್ಯದ ಮಾತನ್ನು ಹೇಳಿ ಬಂದಿದ್ದಾರೆ.
ಈ ಪ್ರಕರಣ ಸಂಬಂಧ ನಟ ದರ್ಶನ್ ವಿರುದ್ಧ ಪೊಲೀಸರಿಗೆ ಮಹತ್ವದ ಸಾಕ್ಷ್ಯಗಳು ಲಭಿಸುತ್ತಿದ್ದು, ಪಟ್ಟಣಗೆರೆ ಶೆಡ್ನಲ್ಲಿ ರೇಣುಕಾಸ್ವಾಮಿ ಕೊಲೆ ನಡೆದ ದಿನ ಆರೋಪಿಗಳು ಪಾರ್ಟಿ ಮಾಡಿದ ಜಾಗದಲ್ಲಿ ಬಿಯರ್ ಬಾಟಲಿ ಪತ್ತೆಯಾಗಿತ್ತು. ಈ ಬಾಟಲಿಯಲ್ಲಿ ರಕ್ತದ ಕಲೆ ಪತ್ತೆಯಾಗಿದ್ದು, ಇದು ರೇಣುಕಾಸ್ವಾಮಿ ಅವರದ್ದು ಎಂದು ತಿಳಿದು ಬಂದಿದೆ. ಅದರಲ್ಲಿ ಆರೋಪಿಯೊಬ್ಬನ ಫಿಂಗರ್ ಪ್ರಿಂಟ್ ಲಭ್ಯವಾಗಿದೆ. ಇದರ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ.