ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ಗೆ ಹೈಕೋರ್ಟ್ ಆರು ವಾರಗಳ ಕಾಲ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.
ಆರೋಗ್ಯ ತಪಾಸಣೆಗಾಗಿ ಜಾಮೀನು ಕೋರಿ ದರ್ಶನ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿ ಈ ಆದೇಶ ನೀಡಿದ್ದಾರೆ.
ಷರತ್ತುಗಳು: ದರ್ಶನ್ ಇಚ್ಚಿಸಿದ ಆಸ್ಪತ್ರೆಯಲ್ಲಿ ದಾಖಲಾಗಬಹುದು. ಮುಂದಿನ ಒಂದು ವಾರದಲ್ಲಿ ಚಿಕಿತ್ಸೆಯ ವಿವರವನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು. ಪಾಸ್ ಪೋರ್ಟ್ ಸರೆಂಡರ್ ಮಾಡಬೇಕು. ಸಾಕ್ಷ್ಯಗಳ ನಾಶಕ್ಕೆ ಮುಂದಾಗಬಾರದು. ಸಾಕ್ಷಿಗಳಿಗೆ ಬೆದರಿಕೆ ಹಾಕಬಾರದು. ನ್ಯಾಯಾಲಯ ಸೂಚನೆ ಇಲ್ಲದೇ ವ್ಯಾಪ್ತಿ ಬಿಟ್ಟು ಹೊರಕ್ಕೆ ಹೋಗಬಾರದು ಎಂಬುದಾಗಿ ನಟ ದರ್ಶನ್ಗೆ ಹೈಕೋರ್ಟ್ ಷರತ್ತುಗಳನ್ನು ವಿಧಿಸಿದೆ.
ದರ್ಶನ್ ಪರ ವಕೀಲರ ವಾದವೇನು?: ಅರ್ಜಿ ಸಂಬಂಧ ಈ ಹಿಂದೆ ನಡೆದಿದ್ದ ವಿಚಾರಣೆ ವೇಳೆ ದರ್ಶನ್ ಪರ ವಕೀಲರು, ನಟ ದರ್ಶನ್ಗೆ ಆರೋಗ್ಯ ತೀವ್ರ ಹದಗೆಟ್ಟಿದೆ. ಇದೀಗ ಶಸ್ತ್ರ ಚಿಕಿತ್ಸೆ ನಡೆಯದಿದ್ದರೇ ಪಾರ್ಶ್ವವಾಯುವಿಗೆ ಗುರಿಯಾಗುವ ಸಾಧ್ಯತೆ ಇದೆ. ಈ ಹಿನ್ನೆಲೆ ಮದ್ಯಂತರ ಜಾಮೀನು ನೀಡಬೇಕು ಎಂದು ಕೋರಿದ್ದರು.
ಸರ್ಕಾರಿ ವಕೀಲರು, ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಚಿಕಿತ್ಸೆ ಪಡೆಯಲು ಸೂಕ್ತ ಕಾರಣಗಳನ್ನು ಅರ್ಜಿದಾರರ ನೀಡಿಲ್ಲ. ಹೀಗಾಗಿ ಜಾಮೀನು ನಿರಾಕರಿಸಬೇಕು ಎಂದು ಕೋರಿದ್ದರು.
ಪ್ರಕರಣದ ಹಿನ್ನೆಲೆ: ಜೂನ್ 9 ರಂದು ಕಾಮಾಕ್ಷಿಪಾಳ್ಯ ಠಾಣಾ ವ್ಯಾಪ್ತಿಯ ಸತ್ವ ಅನುಗ್ರಹ ಅಪಾರ್ಟ್ಮೆಂಟ್ ಸಮೀಪದ ಮೋರಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿತ್ತು. ಆ ಬಳಿಕ ಆರೋಪಿಗಳಾದ ರಾಘವೇಂದ್ರ, ಕಾರ್ತಿಕ್, ನಿಖಿಲ್ ನಾಯ್ಕ್ ಕೇಶವಮೂರ್ತಿ ಕಾಮಾಕ್ಷಿಪಾಳ್ಯ ಠಾಣೆಗೆ ಹಾಜರಾಗಿದ್ದರು. ಬಳಿಕ ಪೊಲೀಸರು ತೀವ್ರ ವಿಚಾರಣೆ ನಡೆಸಿ ನಟ ದರ್ಶನ್ ಮತ್ತು ನಟಿ ಪವಿತ್ರಾ ಗೌಡರನ್ನು ಜೂನ್ 11 ರಂದು ಬಂಧಿಸಿದ್ದರು.
ಸದ್ಯ ದರ್ಶನ್ ಬಳ್ಳಾರಿಯ ಕೇಂದ್ರ ಕಾರಾಗೃಹದಲ್ಲಿದ್ದಾರೆ. ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿದ್ದ ದರ್ಶನ್ ಅವರಿಗೆ ವಿಶೇಷ ಸೌಲಭ್ಯ ನೀಡಿದ ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ದರ್ಶನ್ ಅವರನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಗಿತ್ತು. ಜೊತೆಗೆ ಪವಿತ್ರಾ ಗೌಡ ಮತ್ತು ಕೆಲವರನ್ನು ಪರಪ್ಪನ ಅಗ್ರಹಾರದಲ್ಲಿ ಉಳಿಸಿಕೊಂಡು, ಇನ್ನಿತರ ಆರೋಪಿಗಳನ್ನು ರಾಜ್ಯದ ವಿವಿಧ ಜೈಲುಗಳಿಗೆ ಸ್ಥಳಾಂತರಿಸಲಾಗಿತ್ತು.