ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ 14ನೇ ಆರೋಪಿ ಪ್ರದೋಶ್ ಎಸ್.ರಾವ್ನನ್ನು ಮತ್ತೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರ ಮಾಡುವಂತೆ ಜೈಲಧಿಕಾರಿಗಳಿಗೆ ಹೈಕೋರ್ಟ್ ನಿರ್ದೇಶನ ನೀಡಿದೆ.
ಪ್ರದೋಶ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ. ಅಲ್ಲದೇ, ಪ್ರಕರಣದಲ್ಲಿ ಅರ್ಜಿದಾರರು ದರ್ಶನ್ ಅವರಿಂದ ದೂರ ಇದ್ದಾರೆ. ವೈರಲ್ ಆದ ಫೋಟೋದಲ್ಲಿಯೂ ಕಾಣಿಸಿಕೊಂಡಿಲ್ಲ. ದರ್ಶನ್ ಮೇಲಿನ ಆರೋಪವನ್ನು ಅರ್ಜಿದಾರರ ಮೇಲೆ ಹೊರಿಸಲಾಗಿದೆ ಎಂದು ಪೀಠ ತಿಳಿಸಿದೆ.
ಜೊತೆಗೆ, ವಿಚಾರಣಾಧೀನ ಕೈದಿ ಜೈಲನ್ನು ಆಯ್ಕೆ ಮಾಡಿಕೊಳ್ಳುವಂತಿಲ್ಲ. ಆದರೆ, ಅವರನ್ನು ಬೇರೊಂದು ಜೈಲಿಗೆ ಸ್ಥಳಾಂತರ ಮಾಡಲು ಸೂಕ್ತ ಕಾರಣಗಳಿರಬೇಕು. ವಿವೇಚನೆ ಬಳಸಿ ಈ ರೀತಿಯ ಆದೇಶಗಳನ್ನು ಮಾಡಬೇಕಾಗುತ್ತದೆ ಎಂದು ಪೀಠ ಹೇಳಿದೆ.
ಕೈದಿಗಳನ್ನು ಒಂದು ಜೈಲಿನಿಂದ ಮತ್ತೊಂದು ಜೈಲಿಗೆ ಸ್ಥಳಾಂತರ ಮಾಡುವುದು ಆಡಳಿತಾತ್ಮಕ ಕ್ರಮವಲ್ಲ. ಬದಲಾಗಿ ನ್ಯಾಯಾಂಗ ಮತ್ತು ಅರೆ ನ್ಯಾಯಾಂಗದ ಕಾರ್ಯವಾಗಿದೆ. ಈ ಪ್ರಕ್ರಿಯೆಯಲ್ಲಿ ಕೈದಿಯ ವಾದವನ್ನು ಆಲಿಸಲು ಕಾಲಾವಲಾಶ ಕೊಡಬೇಕಾಗುತ್ತದೆ. ಇಲ್ಲವಾದಲ್ಲಿ ಕೈದಿಯ ವಿರುದ್ಧ ಪೂರ್ವಾಗ್ರಹ ಉಂಟು ಮಾಡಲಿದೆ. ಹೀಗಾಗಿ, ಕೈದಿಗಳನ್ನು ಸ್ಥಳಾಂತರ ಮಾಡುವ ಸಂದರ್ಭದಲ್ಲಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯಗಳು ವಿವೇಚನೆ ಬಳಸಬೇಕು ಎಂದು ಪೀಠ ತಿಳಿಸಿದೆ.
ಪ್ರಕರಣದ ಹಿನ್ನೆಲೆ: ರೇಣುಕಾಸ್ವಾಮಿ ಕೊಲೆ ಪ್ರಕರಣದ ಎರಡನೇ ಆರೋಪಿಯಾಗಿದ್ದು, ನ್ಯಾಯಾಂಗ ಬಂಧನದಲ್ಲಿದ್ದ ನಟ ದರ್ಶನ್ ಇತರ ರೌಡಿಶೀಟರ್ ಆರೋಪಿಗಳೊಂದಿಗೆ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿ ಸಿಗರೇಟು ಮತ್ತು ಕಾಫಿ ಕುಡಿಯುತ್ತಿದ್ದ ಫೋಟೋ ವೈರಲ್ ಆಗಿತ್ತು. ಘಟನೆ ನಂತರ ಎಲ್ಲ ಆರೋಪಿಗಳನ್ನು ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಅನುಮತಿ ಪಡೆದು, ರಾಜ್ಯದ ವಿವಿಧ ಕಾರಾಗೃಹಗಳಿಗೆ ಸ್ಥಳಾಂತರ ಮಾಡಲಾಗಿತ್ತು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ”ಸ್ಥಳಾಂತರಗೊಂಡ ಪ್ರದೋಶ್ ಅವರನ್ನು ಅಂಧೇರಿ ಸೆಲ್ ನಲ್ಲಿ 15 ಗಂಟೆಗಳ ಕಾಲ ಕತ್ತಲೆ ಕೊಣೆಯಲ್ಲಿ ಇರಿಸಲಾಗಿತ್ತು. 8 ಗಂಟೆಗಳ ಕಾಲ ಕ್ಯಾಮರಾ ಮುಂದೆ ಕೂರಿಸಿದ್ದರು” ಎಂದು ವಾದಿಸಿದ್ದರು. ಈ ಸಂಬಂಧ ಅರ್ಜಿದಾರರ ಪತ್ನಿ ಸಲ್ಲಿಸಿದ್ದ ಪ್ರಮಾಣ ಪತ್ರದಲ್ಲಿ ತಿಳಿಸಿದ್ದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಸರ್ಕಾರಿ ವಕೀಲರು, ”ಅಂಧೇರಿ ಎಂಬುದು ಸೆಲ್ನ ಹೆಸರು ಮಾತ್ರ” ಎಂದು ತಿಳಿಸಿದ್ದರು. ಅಲ್ಲದೇ, ಸೆಲ್ನ ಹೆಸರನ್ನು ಅಂಧೇರಿ ಎಂಬುದಾಗಿ ಇಡಲಾಗಿದೆ ಎಂದಿದ್ದರು.
ಈ ವೇಳೆ ಪೀಠ, ”ಅರ್ಜಿದಾರರ ಪತ್ನಿ ಜೈಲಿಗೆ ಭೇಟಿ ನೀಡಿದ ಸಂದರ್ಭದಲ್ಲಿ ವ್ಯಕ್ತಪಡಿಸಿರುವ ಅನುಮಾನ ಸರಿಯಾಗಿದೆ. ಅಲ್ಲದೆ, ಪ್ರದೋಶ್ ಇನ್ನೂ ವಿಚಾರಣಾಧೀನ ಕೈದಿಯಾಗಿದ್ದಾರೆ. ಗಂಭೀರ ಆರೋಪ ಇಲ್ಲದ ಹೊರತಾಗಿ, ಅವರನ್ನು ಸ್ಥಳಾಂತರ ಮಾಡುವುದಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ ಎಂದು ತಿಳಿಸಿತ್ತು.