ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ದರ್ಶನ್ ಆ್ಯಂಡ್ ಟೀಂ ವಿರುದ್ಧ ತನಿಖಾಧಿಕಾರಿಗಳು ಬರೋಬ್ಬರಿ 120ಕ್ಕೂ ಹೆಚ್ಚಿನ ಸಾಕ್ಷ್ಯಗಳನ್ನು ಪೊಲೀಸರು ಕಲೆ ಹಾಕಿದ್ದಾರೆ ಎಂದು ತಿಳಿದು ಬಂದಿದೆ.
ಆರೋಪಿಗಳು ಧರಿಸಿದ್ದ ಬಟ್ಟೆ, ಶೂ, ಚಪ್ಪಲಿ, ಆರೋಪಿಗಳ ಮೊಬೈಲ್ ಗಳು, ಪಟ್ಟಣಗೆರೆ ಶೆಡ್‌ನಲ್ಲಿ ಹಲ್ಲೆಗೆ ಬಳಸಿದ್ದ ಲಾಠಿ, ಮರದ ರಿಪ್ ಪೀಸ್, ತುಳಿದ ಶೂಗಳು, ಆರೋಪಿಗಳು ತಂಗಿದ್ದ ಹೋಟೆಲ್ ಲೆಡ್ಜರ್ ಬುಕ್‌ನಲ್ಲಿ ಹೆಸರು ನಮೂದಾಗಿರುವುದು, ಸಿಸಿ ಕೆಮರಾ ರೆಕಾರ್ಡ್, ಕೃತ್ಯ ನಡೆದ ವೇಳೆ ರೇಣುಕಾಸ್ವಾಮಿ ಕರೆ ತಂದಿರುವ ಕಾರು, ಶವ ಎಸೆಯಲು ಬಳಸಿರುವ ಕಾರು, ದರ್ಶನ್‌ನಿಂದ ಆರೋಪಿಗಳು ಪಡೆದುಕೊಂಡಿದ್ದ ಹಣ, ಪ್ರಕರಣದಲ್ಲಿ 28 ಕಡೆ ಮಹಜರು ಮಾಡಿರುವುದು, ರೇಣುಕಾಸ್ವಾಮಿ ಕರೆತಂದು ಹಲ್ಲೆ ಕೃತ್ಯ ನಡೆಸಿದ ಪಟ್ಟಣಗೆರೆ ಶೆಡ್, ಶವ ಎಸೆದ ಆರೋಪಿಗಳು ಆರ್.ಆರ್.ನಗರದ ಹೊಟೇಲ್ ತಂಗಿರುವುದು ಸೇರಿದಂತೆ 120ಕ್ಕೂ ಹೆಚ್ಚಿನ ಸಾಕ್ಷ್ಯಗಳು ಪೊಲೀಸರ ಕೈ ಸೇರಿದೆ ಎಂದು ತಿಳಿದು ಬಂದಿದೆ.
ರೇಣುಕಾಸ್ವಾಮಿಗೆ ಹಲ್ಲೆ ನಡೆಸಿದಾಗ ಅದನ್ನು ಮೊಬೈಲ್‌ನಲ್ಲಿ ವೀಡಿಯೋ ಮಾಡಿಕೊಂಡಿದ್ದಾರೆ ಎನ್ನಲಾದ ಮೂವರನ್ನು ವಿಚಾರಣೆ ನಡೆಸಲಾಗಿದೆ.
ಹಲ್ಲೆ ವೀಡಿಯೋವನ್ನು ಬೇರೆಯವರಿಗೂ ಕಳುಹಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಮೊಬೈಲ್ ಪರಿಶೀಲನೆ ವೇಳೆ ವೀಡಿಯೋ ಡಿಲೀಟ್ ಮಾಡಿರುವುದು ಕಂಡು ಬಂದಿದೆ ಎನ್ನಲಾಗಿದೆ. ಆದರೆ ಇವರ ವಿರುದ್ಧ ಸೂಕ್ತ ಸಾಕ್ಷ್ಯ ಸಿಗದ ಹಿನ್ನೆಲೆಯಲ್ಲಿ ಪೊಲೀಸರು ವಿಚಾರಣೆ ನಡೆಸಿ ಬಿಟ್ಟು ಕಳುಹಿಸಿದ್ದಾರೆ ಎನ್ನಲಾಗಿದೆ.
ಪೊಲೀಸರಿಗೆ ಶರಣಾಗಲು ಆರಂಭದಲ್ಲಿ ಕಾರ್ತಿಕ್ ಅಲಿಯಾಸ್ ಕಪ್ಪೆ ನಿರಾಕರಿಸಿದ್ದ. ಈ ಕಾರಣಕ್ಕೆ ಫೋನ್ ಕಸಿದಿದ್ದ ದೀಪಕ್, ಆ ಮೊಬೈಲ್ ಅನ್ನು ಪಟ್ಟಣಗೆರೆ ಶೆಡ್‌ನಲ್ಲಿ ಬಚ್ಚಿಟ್ಟಿದ್ದ. ಆರೋಪಿ ದೀಪಕ್ ನ ವಿಚಾರಣೆ ವೇಳೆ ಈ ಸಂಗತಿ ಹೊರ ಬಿದ್ದಿದೆ. ಇದೀಗ ಶೆಡ್ ಗೆ ಹೋಗಿ ಮೊಬೈಲ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ನಟ ದರ್ಶನ್ ಪರ ಹಿರಿಯ ವಕೀಲ ಸಿ.ವಿ. ನಾಗೇಶ್ ವಾದ ನಡೆಸುವ ಸಾಧ್ಯತೆಗಳಿವೆ ಎಂದು ತಿಳಿದು ಬಂದಿದೆ. ಈಗಾಗಲೇ ದರ್ಶನ್ ಆಪ್ತರು ಸಿ.ವಿ. ನಾಗೇಶ್ ಅವರನ್ನು ಸಂಪರ್ಕಿಸಿದ್ದಾರೆ ಎನ್ನಲಾಗಿದೆ. ಇದೊಂದು ಹೈ ಪ್ರೊಫೈಲ್ ಪ್ರಕರಣ ಆಗಿರುವುದರಿಂದ ಸಿ.ವಿ. ನಾಗೇಶ್ ಅವರೇ ವಾದ ನಡೆಸುವುದು ಸೂಕ್ತವೆಂದು ದರ್ಶನ್ ಕುಟುಂಬ ಹಾಗೂ ಅವರ ಆಪ್ತರು ತೀರ್ಮಾನಕ್ಕೆ ಬಂದಿದ್ದಾರೆ ಎನ್ನಲಾಗಿದೆ.