ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ ಇಂದು ಶುಕ್ರವಾರ ರೆಪೋ ದರವನ್ನು ಶೇ. 6.5ರಲ್ಲಿ ಮುಂದುವರಿಸಲು ನಿರ್ಧರಿಸಿದೆ.
ಬುಧವಾರದಿಂದ (ಜೂನ್ 5) ನಡೆದ ಮಾನಿಕಟರಿ ಪಾಲಿಸಿ ಕಮಿಟಿ ಸಭೆಯಲ್ಲಿ ತೆಗೆದುಕೊಂಡ ನಿರ್ಧಾರವನ್ನು ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಇಂದು ಪ್ರಕಟಿಸಿದ್ದಾರೆ.
ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಶಕ್ತಿಕಾಂತ ದಾಸ್, ಹಣದುಬ್ಬರ ಇನ್ನೂ ಗುರಿಗಿಂತ ಮೇಲೆಯೇ ಇರುವುದರಿಂದ ಇನ್ನಷ್ಟು ಕಾಲ ಬಡ್ಡಿದರ ಮುಂದುವರಿಸುವುದು ಸೂಕ್ತ ಎನ್ನುವ ನಿಲುವು ತಳೆದಿದ್ದಾರೆ. ಕಳೆದ 15-16 ತಿಂಗಳಿಂದ ಆರ್ಬಿಐ ತನ್ನ ರೆಪೋ ಅಥವಾ ಬಡ್ಡಿದರದಲ್ಲಿ ಬದಲಾವಣೆ ಮಾಡಿಲ್ಲ. 2023ರ ಫೆಬ್ರುವರಿ 8ರಂದು ರೆಪೋ ದರವನ್ನು ಶೇ. 6.25ರಿಂದ ಶೇ. 6.50ಕ್ಕೆ ಹೆಚ್ಚಿಸಲಾಗಿತ್ತು. ಅಲ್ಲಿಂದ ಈವರೆಗೂ ರೆಪೋ ದರದಲ್ಲಿ ಬದಲಾವಣೆ ಮಾಡಲಾಗಿಲ್ಲ. ಇನ್ನಷ್ಟು ತಿಂಗಳು ಇದೇ ದರ ಮುಂದುವರಿಯುವ ಸಾಧ್ಯತೆ ಇದೆ.
ಈ ಬಾರಿ ಆರ್ ಬಿಐನಿಂದ ಬಡ್ಡಿದರದಲ್ಲಿ ಬದಲಾವಣೆ ಮಾಡುವ ಸಾಧ್ಯತೆ ಇಲ್ಲ ಎಂದೇ ಬಹಳಷ್ಟು ಆರ್ಥಿಕ ತಜ್ಞರು ಅಂದಾಜಿಸಿದ್ದರು. ಅದು ನಿಜವಾಗಿದೆ. ಹಣದುಬ್ಬರ ಇನ್ನಷ್ಟು ಕಾಲ ತುಸು ಮೇಲ್ಮಟ್ಟದಲ್ಲೇ ಇರುವುದರಿಂದ, ಮತ್ತು ಹಣದುಬ್ಬರ ಹೆಚ್ಚೇ ಇದ್ದರೂ ಜಿಡಿಪಿ ನಿರೀಕ್ಷೆಮೀರಿ ಬೆಳೆಯುತ್ತಿರುವುದರಿಂದ ರೆಪೋ ದರದಲ್ಲಿ ಬದಲಾವಣೆ ಮಾಡುವ ಅವಶ್ಯಕತೆ ಆರ್ಬಿಐಗೆ ಬಂದಿಲ್ಲ. ಶಕ್ತಿಕಾಂತ ದಾಸ್ ಕೂಡ ಇಂದು ಸುದ್ದಿಗೋಷ್ಠಿಯಲ್ಲಿ ಈ ಅಂಶಗಳನ್ನು ಉಲ್ಲೇಖಿಸಿದ್ದಾರೆ.
ರೆಪೋದರ, ರಿವರ್ಸ್ ರೆಪೋ, ವಿತ್ಡ್ರಾಯಲ್ ಆಫ್ ಅಕಾಮೊಡೇಶನ್, ಎಸ್ಎಲ್ಆರ್ ಹೀಗೆ ವಿವಿಧ ದರಗಳ ಯಥಾಸ್ಥಿತಿ ಮುಂದುವರಿಯಲಿದೆ.