ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಚುನಾವಣೆ ನಡೆಸಲು ರಾಜ್ಯ ಸರ್ಕಾರವು ಕಾಲಾವಕಾಶ ಕೋರಿ ಸಲ್ಲಿಸಿರುವ ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ರಾಜ್ಯ ಚುನಾವಣಾ ಆಯೋಗಕ್ಕೆ ಶುಕ್ರವಾರ ಸುಪ್ರೀಂ ಕೋರ್ಟ್ ನೋಟಿಸ್ ಜಾರಿ ಮಾಡಿದೆ.
ರಾಜ್ಯ ಸರ್ಕಾರ ಸಲ್ಲಿಸಿರುವ ಅಫಿಡವಿಟ್ ಮತ್ತು ರಾಜ್ಯ ಚುನಾವಣಾ ಆಯೋಗ ಸಲ್ಲಿಸಿರುವ ಸ್ಥಿತಿಗತಿ ವರದಿಗಳನ್ನು ಪರಿಶೀಲಿಸಿದ ನ್ಯಾಯಮೂರ್ತಿ ಎಸ್ ಅಬ್ದುಲ್ ನಜೀರ್ ಮತ್ತು ಜೆ ಬಿ ಪರ್ದಿವಾಲಾ ಅವರ ನೇತೃತ್ವದ ವಿಭಾಗೀಯ ಪೀಠವು ನೋಟಿಸ್ ಜಾರಿ ಮಾಡಿ, ವಿಚಾರಣೆಯನ್ನು ಡಿಸೆಂಬರ್ 15ಕ್ಕೆ ಮುಂದೂಡಿತು.
ವಿಚಾರಣೆ ಆರಂಭವಾಗುತ್ತಿದ್ದಂತೆ ನ್ಯಾ. ನಜೀರ್ ಅವರು “ಚುನಾವಣೆ ಮುಂದೂಡುವುದರ ಸಂಬಂಧ ರಾಜ್ಯ ಸರ್ಕಾರ ಸಲ್ಲಿಸಿರುವ ಅರ್ಜಿಯನ್ನು ಪರಿಶೀಲಿಸಿದ್ದು, ಮೀಸಲಾತಿ ನಿಗದಿಪಡಿಸಬೇಕಿದೆ. ಮೀಸಲಾತಿ ನಿಗದಿಪಡಿಸದೇ ಚುನಾವಣೆ ನಡೆಸಲಾಗದು. ಸರ್ಕಾರ ಅರ್ಜಿಯಲ್ಲಿ ಹೇಳಿರುವುದನ್ನು ಹೊರತುಪಡಿಸಿ ಚುನಾವಣೆ ನಡೆಸಲಾಗುತ್ತದೆಯೇ? ಮೀಸಲಾತಿ ನಿಗದಿಪಡಿಸದೆ ಚುನಾವಣೆ ನಡೆಸಿದರೆ ಯಾರಿಗೆ ಸಮಸ್ಯೆಯಾಗುತ್ತದೆ?” ಎಂದರು.
ಆಗ ರಾಜ್ಯ ಚುನವಣಾ ಆಯೋಗವನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಕೆ ಎನ್ ಫಣೀಂದ್ರ ಅವರು “ಮೂರು ಹಂತದ ಪರೀಕ್ಷೆ ಆಗಿಲ್ಲವೆಂದಾದರೆ ಆ ಸೀಟನ್ನು ಸಾಮಾನ್ಯ ವರ್ಗಕ್ಕೆ ನಿಗದಿಪಡಿಸುವಂತೆ ಸರ್ವೋಚ್ಚ ನ್ಯಾಯಾಲಯವು ಎರಡು ಪ್ರಕರಣಗಳಲ್ಲಿ ತೀರ್ಪು ನೀಡಿದೆ. ಹಿಂದುಳಿದ ವರ್ಗಗಳ ಆಯೋಗವು ನಮ್ಮ ವರದಿ ಸಿದ್ಧವಾಗಿದೆ ಎಂದು ಹೇಳಿದೆ. ಮೀಸಲಾತಿ ನಿಗದಿಪಡಿಸಲು ರಾಜ್ಯ ಸರ್ಕಾರಕ್ಕೆ ಯಾವುದೇ ಸಮಸ್ಯೆಯಿಲ್ಲ” ಎಂದು ಆಕ್ಷೇಪಿಸಿದರು.
ಅದಕ್ಕೆ ಪೀಠವು “ಹಿಂದುಳಿದ ವರ್ಗದ ಸೀಟನ್ನು ಸಾಮಾನ್ಯ ವರ್ಗಕ್ಕೆ ನಿಗದಿಪಡಿಸಿದರೆ ಇಡೀ ಉದ್ದೇಶಕ್ಕೆ ಸೋಲಾಗಲಿದೆ” ಎಂದರು.
ಅರ್ಜಿದಾರರ ಪರ ವಕೀಲರೊಬ್ಬರು “ಬಿಬಿಎಂಪಿಗೆ ಚುನಾವಣೆ ನಡೆದು ಎರಡು ವರ್ಷಗಳಾಗಿವೆ. ಸಾಂವಿಧಾನಿಕ ನಿಬಂಧನೆಯನ್ನು ಪಾಲಿಸಲಾಗಿಲ್ಲ. ಈಗ ಚುನಾವಣೆ ನಡೆಯದಿದ್ದರೆ, ಶೀಘ್ರದಲ್ಲೇ ವಿಧಾನಸಭೆ ಚುನಾವಣೆ ಬರಲಿದೆ. ಆಗ ಮತ್ತೆ ಬಿಬಿಎಂಪಿ ಚುನಾವಣೆ ವಿಳಂಬವಾಗಲಿದೆ” ಎಂದು ಪೀಠದ ಗಮನಸೆಳೆದರು.
ಆಗ ನ್ಯಾ. ನಜೀರ್ ಅವರು “ಎಲ್ಲದಕ್ಕೂ ನಮ್ಮ ಸಹಮತವಿದೆ. ಆದರೆ, ಹಿಂದುಳಿದ ವರ್ಗಗಳಿಗೆ ಪ್ರಾತಿನಿಧ್ಯ ಸಿಗಬೇಕು ಎಂದು ನನಗೆ ಬಲವಾಗಿ ಅನ್ನಿಸುತ್ತದೆ.” ಎಂದರು.
ರಾಜ್ಯ ಸರ್ಕಾರದ ಅರ್ಜಿಗೆ ಸಂಬಂಧಿಸಿದಂತೆ ನೋಟಿಸ್ ಜಾರಿ ಮಾಡಲಾಗುವುದು. ಮುಂದಿನ ಗುರುವಾರಕ್ಕೆ ವಿಚಾರಣೆ ಮುಂದೂಡಲಾಗಿದೆ ಎಂದು ನ್ಯಾಯಾಲಯ ಹೇಳಿತು.
ರಾಜ್ಯ ಸರ್ಕಾರದ ಪರವಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಮತ್ತು ವಿಡಿಯೊ ಕಾನ್ಫರೆನ್ಸ್ನಲ್ಲಿ ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ ಅವರು ಹಾಜರಿದ್ದರು