ಬೆಂಗಳೂರು: ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಟಿಕೆಟ್ ಅನ್ನು ಸಿಪಿ ಯೋಗೇಶ್ವರ್ ಅವರಿಗೆ ನೀಡುವಂತೆ ಹೈಕಮಾಂಡ್ ಬಳಿ ಮನವಿ ಮಾಡುತ್ತೇವೆ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಹೇಳಿದರು.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾನು, ಅಶ್ವತ್ಥ್ ನಾರಾಯಣ ಸಿ.ಪಿ.ಯೋಗೇಶ್ವರ್ ಅವರನ್ನು ಭೇಟಿ ಮಾಡಿದ್ದೇವೆ. ಹಾಗೆ ಹೆಚ್. ಡಿ.ಕುಮಾರಸ್ವಾಮಿ ಅವರ ಜೊತೆ ಕೂಡ ಚರ್ಚೆ ಮಾಡಿದ್ದೇವೆ. ಸಿಪಿ ಯೋಗೇಶ್ವರ್ ಅವರಿಗೆ ಟಿಕೆಟ್ ನೀಡುವಂತೆ ಹೈಕಮಾಂಡ್ ಬಳಿ ಕೇಳುತ್ತೇವೆ. ಯಾವಾಗ ದೆಹಲಿಗೆ ಹೋಗುತ್ತೇವೆ ಎಂದು ಶೀಘ್ರದಲ್ಲೇ ತಿಳಿಸುತ್ತೇವೆ ಎಂದ ಹೇಳಿದರು.
ಕೊಲೆ ಆರೋಪಿ ದರ್ಶನ್ಗೆ ಜೈಲಿನಲ್ಲಿ ರಾಜಾತಿಥ್ಯ ವಿಚಾರವಾಗಿ ಮಾತನಾಡಿದ ಅವರು, ಫೋಟೋ ತೆಗೆಯಲು ಮೊಬೈಲ್ ಎಲ್ಲಿಂದ ಬಂತು. ಇದೆಲ್ಲ ನುಳುಚಿಕೊಳ್ಳುವ ವಿಚಾರ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಇಲ್ಲ. ಇಷ್ಟೆಲ್ಲ ಅಪರಾಧ ಪ್ರಕರಣಗಳು ನಡೆಯುತ್ತಿದ್ದರೂ, ಕೆಲವು ಮಂತ್ರಿಗಳು ನಮಗೆ ಯಾವ ಖಾತೆ ಸಿಗುತ್ತದೆ, ಯಾವ ಖಾತೆ ಹೋಗುತ್ತದೆ ಅಂತ ಭೀತಿಯಲ್ಲಿದ್ದಾರೆ. ಜೈಲಿನಲ್ಲಿ ನಡೆದ ಘಟನೆ ಬಗ್ಗೆ ಸರ್ಕಾರ ಉತ್ತರ ಕೊಡಬೇಕು ಎಂದು ಒತ್ತಾಯಿಸಿದರು.
ಸರ್ಕಾರದ ವಿರುದ್ಧ ಬಿಜೆಪಿ ಹೋರಾಟ ದೆಹಲಿ ಮಟ್ಟಕ್ಕೆ ತೆಗೆದುಕೊಂಡು ಹೋಗುವ ವಿಚಾರವಾಗಿ ಮಾತನಾಡಿದ ಅವರು, ಜೆಡಿಎಸ್ ನಾಯಕರ ಜೊತೆ ಚರ್ಚೆ ಮಾಡುತ್ತಿದ್ದೇವೆ. ಚರ್ಚೆ ಪ್ರಾಥಮಿಕ ಹಂತದಲ್ಲಿದೆ. ಗುರುವಾರ ಕೋರ್ಟ್ನಲ್ಲಿ ಕೇಸ್ ಕೂಡ ಬರಲಿದೆ. ಮುಂದೆ ಚರ್ಚೆ ಮಾಡುತ್ತೇವೆ ಎಂದು ಹೇಳಿದರು.
ಶಾಸಕರ ಖರೀದಿಗೆ ಬಿಜೆಪಿ ಪ್ರಯತ್ನಿಸುತ್ತಿದೆ ಎಂಬ ಕಾಂಗ್ರೆಸ್ ನಾಯಕರ ಆರೋಪದ ವಿಚಾರವಾಗಿ ಮಾತನಾಡಿದ ಅವರು, ಸಿದ್ದರಾಮಯ್ಯ ಸರ್ಕಾರ ಹಗರಣದಲ್ಲಿ ಸಿಲುಕಿದೆ. ಹೀಗಾಗಿ ಜನರ ಮನಸ್ಸಿನ ವಿಷಯ ಡೈವರ್ಟ್ ಮಾಡುತ್ತಿದ್ದಾರೆ ಅಷ್ಟೇ. ಡಿಕೆ ಶಿವಕುಮಾರ್ ದೆಹಲಿಗೆ ಹೋಗಿ ಬಿಜೆಪಿ ನಾಯಕರನ್ನು ಭೇಟಿ ಮಾಡುತ್ತಿದ್ದಾರೆ. ಸರ್ಕಾರ ಇರುತ್ತದೋ, ಬೀಳುತ್ತದೋ ಎಂಬ ಆತಂಕದಲ್ಲಿದ್ದಾರೆ. ನಾವ್ಯಾರು ಕೂಡ ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ಬೀಳಿಸುವುದಿಲ್ಲ. ಯಾವ ಲೀಡರ್ ನಿಮ್ಮ ಬಳಿ ಬಂದು ಮಾತಾಡಿದ್ದಾರೆ ಹೆಸರು ಹೇಳಿ? ಎಂದು ತಿರುಗೇಟು ನೀಡಿದರು.