ಭಾರತದಲ್ಲಿ ತಯಾರಾಗುವ ಟ್ರ್ಯಾಕ್ಟರ್ ಹಾಗೂ ಇತರ ಕೃಷಿ ಯಂತ್ರೋಪಕರಣಗಳ ‘ಗರಿಷ್ಠ ಚಿಲ್ಲರೆ ಮಾರಾಟ ದರ’ (ಎಂಆರ್‌ಪಿ)ವನ್ನು ಆಯಾ ಉತ್ಪಾದಕ ಕಂಪನಿಗಳ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸುವುದು ಹಾಗೂ ಉಪಕರಣಗಳ ಮೇಲೆ ಮುದ್ರಿಸುವುದನ್ನು ಕಡ್ಡಾಯಗೊಳಿಸುವಂತೆ ಸರ್ಕಾರಗಳಿಗೆ ನಿರ್ದೇಶನ ನೀಡಬೇಕು ಎಂದು ಕೋರಿದ್ದ ಅರ್ಜಿದಾರರಿಗೆ ಐದು ಸಾವಿರ ರೂಪಾಯಿ ದಂಡ ವಿಧಿಸಿ ಕರ್ನಾಟಕ ಹೈಕೋರ್ಟ್ ಬುಧವಾರ ಆದೇಶಿಸಿದೆ.
ದಾವಣಗೆರೆಯ ವಿ ರಾಘವೇಂದ್ರ ಪ್ರಸಾದ್ ಎಂಬುವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಎನ್ ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ ವಿ ಅರವಿಂದ್ ಅವರ ವಿಭಾಗೀಯ ಪೀಠ ನಡೆಸಿತು.
ವಾದ ಆಲಿಸಿದ ಪೀಠವು “ಇದೊಂದು ಸರ್ಕಾರದ ನೀತಿ ನಿರ್ಧಾರದ ವಿಚಾರ. ಇಲ್ಲಿ ನ್ಯಾಯಾಲಯ ಮಧ್ಯಪ್ರವೇಶ ಮಾಡಲಾಗದು. ಅರ್ಜಿದಾರರು ತಮ್ಮ ಮನವಿಯನ್ನು ಸಂಬಂಧಪಟ್ಟ ಇಲಾಖೆ, ಅಧಿಕಾರಿಗಳ ಮುಂದೆ ಸಲ್ಲಿಸಲು ಸ್ವತಂತ್ರರಾಗಿದ್ದಾರೆ” ಎಂದು ಹೇಳಿ ಅರ್ಜಿಯನ್ನು ಇತ್ಯರ್ಥಪಡಿಸುವುದಾಗಿ ಹೇಳಿತ್ತು.
ಈ ಸಂದರ್ಭದಲ್ಲಿ, ಕೇಂದ್ರ ಸರ್ಕಾರದ ಪರ ವಕೀಲರು, ಅರ್ಜಿದಾರರು ಕಳೆದ 30 ವರ್ಷಗಳಿಂದ ಸ್ವರಾಜ್ ಮಜ್ದಾ ಟ್ರ್ಯಾಕ್ಟರ್‌ಗಳ ಸೇಲ್ಸ್ ಮತ್ತು ಸರ್ವಿಸ್ ಸೆಂಟರ್ ನಡೆಸುತ್ತಿದ್ದಾರೆ ಎಂದು ಪೀಠದ ಗಮನಕ್ಕೆ ತಂದರು. ಅದನ್ನು ಪರಿಗಣಿಸಿದ ಪೀಠವು “ಇದು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಆಗಲು ಸಾಧ್ಯವಿಲ್ಲ ಎಂದು ಅರ್ಜಿದಾರರಿಗೆ 5 ಸಾವಿರ ರೂಪಾಯಿ ದಂಡ ವಿಧಿಸಿ, ದಂಡದ ಮೊತ್ತವನ್ನು ಮೂರು ವಾರಗಳಲ್ಲಿ ರಾಜ್ಯ ಕಾನೂನು ಸೇವಾ ಪ್ರಾಧಿಕಾರಕ್ಕೆ ಪಾವತಿಸಬೇಕು” ಎಂದು ನಿರ್ದೇಶನ ನೀಡಿ ಅರ್ಜಿಯನ್ನು ವಜಾಗೊಳಿಸಿತು.
ಟ್ರ್ಯಾಕ್ಟರ್ ಹಾಗೂ ಕೃಷಿ ಉಪಕರಣಗಳ ತಯಾರಕಾ ಸಂಸ್ಥೆಗಳು ಎಂಆರ್‌ಪಿ ದರ ನಮೂದಿಸುವುದಿಲ್ಲ ಎಂಬುದನ್ನೇ ಬಂಡವಾಳ ಮಾಡಿಕೊಂಡು ಅನೇಕ್ ಡೀಲರ್‌ಗಳು ಮನಬಂದಂತೆ ದರ ನಿಗದಿಪಡಿಸಿ ರೈತರನ್ನು ಶೋಷಣೆ ಮಾಡುತ್ತಿದ್ದಾರೆ. ಆದ್ದರಿಂದ, ಭಾರತದಲ್ಲಿ ತಯಾರಾಗುವ ಟ್ರ್ಯಾಕ್ಟರ್ ಹಾಗೂ ಇತರ ಕೃಷಿ ಯಂತ್ರೋಪಕಣಗಳ ‘ಗರಿಷ್ಠ ಚಿಲ್ಲರೆ ಮಾರಾಟ ದರ’ವನ್ನು (ಎಂಆರ್‌ಪಿ) ಆಯಾ ಉತ್ಪಾದಕ ಕಂಪೆನಿಗಳ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸುವುದು ಹಾಗೂ ಉಪಕರಣಗಳ ಮೇಲೆ ಮುದ್ರಿಸುವುದನ್ನು ಕಡ್ಡಾಯಗೊಳಿಸುವಂತೆ ಸರ್ಕಾರಗಳಿಗೆ ನಿರ್ದೇಶನ ನೀಡಬೇಕು ಎಂದು ಅರ್ಜಿದಾರರು ಕೋರಿದ್ದರು.
ಮುಂದುವರೆದು, ಕರ್ನಾಟಕದಲ್ಲಿ ದಸರಾ, ದೀಪಾವಳಿ, ಯುಗಾದಿ ಹಬ್ಬಗಳ ಸಂದರ್ಭದಲ್ಲಿ ರೈತರು ಹೆಚ್ಚಾಗಿ ಕೃಷಿ ಉಪಕರಣಗಳನ್ನು ಖರೀದಿಸುತ್ತಾರೆ. ಈ ಸಂದರ್ಭದಲ್ಲಿ ಎಂಆರ್‌ಪಿ ಬಗ್ಗೆ ಪತ್ರಿಕೆಗಳಲ್ಲಿ ವ್ಯಾಪಕ ಜಾಹೀರಾತು ನೀಡಬೇಕು. ಯಾವುದೇ ಕೃಷಿ ಉಪಕರಣ ತಯಾರಿಕಾ ಘಟಕಗಳಿಂದ ಹೊರಬರುವ ವೇಳೆ ಅವುಗಳ ಮೇಲೆ ಎಂಆರ್‌ಪಿ ಮುದ್ರೆ ಹಾಕಿರಬೇಕು. ಎಲ್ಲಾ ಮಾದರಿಯ ಕೃಷಿ ಉಪಕರಣಗಳ ಮಾರಾಟದ ದರ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಕೃಷಿ ಅಧಿಕಾರಿಗಳ ಕಚೇರಿಯಲ್ಲಿ ಲಭ್ಯವಾಗಿಸಬೇಕು. ಟ್ರ್ಯಾಕ್ಟರ್ ಕಂಪನಿಗಳ ಏಕಸ್ವಾಮ್ಯತೆ ಮತ್ತು ಅನ್ಯಾಯಗಳ ಮೇಲೆ ಸರ್ಕಾರ ನಿಗಾ ವಹಿಸಬೇಕು. ದರ ನಿಗದಿ ಮತ್ತು ಏರಿಕೆ ಮೇಲೆ ಸರ್ಕಾರ ಮಿತಿ ಹೇರಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿತ್ತು.