ಬೆಂಗಳೂರು: ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಹೊರಗುತ್ತಿಗೆ ನೇಮಕಾತಿ ಯಲ್ಲೂ ಮೀಸಲಾತಿ ಜಾರಿಗೊಳಿಸಲಾಗಿದೆ.
ಪ. ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳ ಜತೆಗೆ ಮಹಿಳೆಯರಿಗೂ ಮೀಸಲಾತಿ ನೀಡಿ ಸರಕಾರ ಸೋಮವಾರ ಸುತ್ತೋಲೆ ಹೊರಡಿಸಿದೆ.
ಕಳೆದ ಡಿಸೆಂಬರ್‌ನಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನವಾದಂತೆ ಈ ಸುತ್ತೋಲೆ ಹೊರಡಿಸಲಾಗಿದ್ದು, ರಾಜ್ಯ ಸರಕಾರ ಕಚೇರಿಗಳ ವಾಹನ ಚಾಲಕರು, ಡಾಟಾ ಎಂಟ್ರಿ ಅಪರೇಟರ್, ಸ್ವಚ್ಛತ ಸಿಬಂದಿ, ಗ್ರೂಪ್ ಡಿ ಮುಂತಾದ ಹುದ್ದೆಗಳಿಗೆ ಹೊರಗುತ್ತಿಗೆಯಡಿ ನೇಮಕಾತಿಯಲ್ಲಿ ಸಾಮಾಜಿಕ ನ್ಯಾಯ ಮತ್ತು ಸಮಾನ ಉದ್ಯೋ ಗಾವಕಾಶವನ್ನು ಕಲ್ಪಿಸುವ ದೃಷ್ಟಿಯಿಂದ ಹೊರ ಗುತ್ತಿಗೆ ಮೀಸಲಾತಿಯನ್ನು ಕಡ್ಡಾಯಗೊಳಿಸ ಲಾಗುತ್ತಿದೆ ಎಂದು ಸರಕಾರ ಹೇಳಿದೆ.
ಈ ನಿಯಮಗಳು ಸರಕಾರದ ಎಲ್ಲ ಇಲಾಖೆ ಗಳು, ಸ್ವಾಯತ್ತ ಸಂಸ್ಥೆಗಳು, ನಿಗಮಗಳು, ಮಂಡಳಿ ಗಳು ಮತ್ತು ವಿ.ವಿ.ಗಳಿಗೆ ಅನ್ವಯಿಸುತ್ತದೆ ಎಂದು ಸುತ್ತೋಲೆಯಲ್ಲಿ ಸ್ಪಷ್ಟಪಡಿಸಲಾಗಿದೆ.
ಹೊರಗುತ್ತಿಗೆ ಮೀಸಲಾತಿ ಜಾರಿಗೊಳಿಸುವುದರಿಂದ ತಮಗೆ ತೋಚಿದಂತೆ ನೇಮಕಾತಿ ಮಾಡಿಕೊಳ್ಳುವ ವ್ಯವಸ್ಥೆಗೆ ಕಡಿವಾಣ ಬೀಳುತ್ತದೆ. ಸಮಾಜದ ವಿವಿಧ ವರ್ಗದ ಜನರಿಗೆ ಹೊರಗುತ್ತಿಗೆಯ ಮೂಲಕ ಉದ್ಯೋಗ ಪಡೆಯುವ ಅವಕಾಶ ಹೆಚ್ಚಾಗಲಿದೆ
ಏನಿದು ಮೀಸಲಾತಿ?
ಸರಕಾರ ಸಿಬಂದಿಯನ್ನು ತಾನೇ ನೇರವಾಗಿ ನೇಮಕ ಮಾಡಿಕೊಳ್ಳುವಾಗ ಮೀಸಲಾತಿ ನೀಡಲಾಗುತ್ತದೆ. ಆದರೆ ಸರಕಾರ ಇತ್ತೀಚೆಗಿನ ದಿನಗಳಲ್ಲಿ ಡಿ ಗ್ರೂಪ್, ಸ್ವಚ್ಛತ ಸಿಬಂದಿ, ವಾಹನ ಚಾಲಕರು, ಡಾಟಾ ಎಂಟ್ರಿ ಅಪರೇಟರ್ ಹುದ್ದೆಗಳಿಗೆ ಹೊರಗುತ್ತಿಗೆಯ ಮೂಲಕ ನೇಮಕ ಮಾಡಿಕೊಳ್ಳುತ್ತಿದೆ. ಹೊರಗುತ್ತಿಗೆ ನೇಮಕದಲ್ಲಿ ಈವರೆಗೆ ಮೀಸಲಾತಿ ಅನ್ವಯ ಆಗುತ್ತಿರಲಿಲ್ಲ.
ಷರತ್ತುಗಳೇನು?
-45 ದಿನಗಳಿಗಿಂತ ಕಡಿಮೆ ಅವಧಿಯ ಹೊರ ಗುತ್ತಿಗೆಯಡಿ ನೇಮಕಾತಿಗೆ ಮೀಸಲಾತಿ ಅನ್ವಯಿಸುವುದಿಲ್ಲ.
ಯಾವುದೇ ಇಲಾಖೆಯಲ್ಲಿ ಕನಿಷ್ಠ 20 ಅಭ್ಯರ್ಥಿಗಳನ್ನು ಹೊರಗುತ್ತಿಗೆ ಆಧಾರದಲ್ಲಿ ನೇಮಕ ಮಾಡುವ ಸಂದರ್ಭದಲ್ಲಿ ಮಾತ್ರ ಈ ಮೀಸಲಾತಿ ನಿಯಮ ಜಾರಿ ಸಾಧ್ಯ.
-ಹೊರ ಸಂಪನ್ಮೂಲ ಏಜೆನ್ಸಿಗಳು ಟೆಂಡರ್ ಕರೆಯುವಾಗ ಕಡ್ಡಾಯವಾಗಿ ಮೀಸಲಾತಿಯಂತೆ ಸಿಬಂದಿಯನ್ನು ಪಡೆಯುವ ಷರತ್ತು ನಮೂದಿಸಬೇಕು.
-ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ / ಹಿಂದುಳಿದ ವರ್ಗಗಳಿಗೆ ನಿಗದಿಪಡಿಸಿದ ಮೀಸಲಾತಿ ಪ್ರಮಾಣ ದಲ್ಲಿ ಕನಿಷ್ಠ ಶೇ. 33 ಮಹಿಳೆಯರನ್ನು ನೇಮಕ ಮಾಡಬೇಕು. ನೇಮಕಗೊಂಡ ಅಭ್ಯರ್ಥಿ ಕರ್ತವ್ಯಕ್ಕೆ ಹಾಜರಾಗದಿದ್ದಲ್ಲಿ ಅದೇ ಪ್ರವರ್ಗಕ್ಕೆ ಸೇರಿದ ಅಭ್ಯರ್ಥಿಯನ್ನು ನೇಮಿಸಿಕೊಳ್ಳಬೇಕು.
-ನೇಮಕಗೊಳ್ಳುವ ಅಭ್ಯರ್ಥಿಯ ಕನಿಷ್ಠ ವಯಸ್ಸು 18 ವರ್ಷ ಮತ್ತು ಗರಿಷ್ಠ ವಯಸ್ಸು 60 ವರ್ಷ ಆಗಿರಬೇಕು. ಈ ನೌಕರರನ್ನು ಯಾವುದೇ ಕಾರಣಕ್ಕೂ ಖಾಯಂ ಮಾಡಲು ಅವಕಾಶವಿಲ್ಲ.