ಚಿಕ್ಕಮಗಳೂರು: ವಸತಿ ಶಾಲೆ ವಿದ್ಯಾರ್ಥಿನಿಯರಿಗೆ ಪ್ಯಾರಾ ನರ್ಸಿಂಗ್ ಕೋರ್ಸ್ ಹೆಸರಲ್ಲಿ ಅಮಲು ಬರೆಸುವ ಔಷಧಿ ನೀಡಿ ಲೈಂಗಿಕ ದೌರ್ಜನ್ಯ ಎಸಗಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.
ಈ ಸಂಬಂಧ ಕಡೂರು ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಕಡೂರು ಪೊಲೀಸ್ ಠಾಣಾ ವ್ಯಾಪ್ತಿಯ ವಸತಿ ಶಾಲೆಯೊಂದರಲ್ಲಿ ಸರ್ಕಾರಿ ಅಧಿಕಾರಿಯಿಂದಲೇ ಅಮಾಯಕ ಹೆಣ್ಣು ಮಕ್ಕಳನ್ನು ಲೈಂಗಿಕವಾಗಿ ಬಳಸಿಕೊಳ್ಳುವ ಕ್ರೂರ ಕೃತ್ಯ ನಡೆದಿದೆ. ಘಟನೆ ಸಂಬಂಧ ಮೂವರನ್ನ ಪೊಲೀಸರು ಬಂಧಿಸಿದ್ದಾರೆ.
ವಸತಿ ಶಾಲೆಯ ಡಿ. ದರ್ಜೆ ನೌಕರ ಸುರೇಶ್, ಶೂಶ್ರುಕಿ ಚಂದನ, ವಿನಯ್ ಬಂಧಿತ ಆರೋಪಿಗಳು.
ಅಮಲು ಬರಿಸುವ ಔಷಧಿ ನೀಡಿ ಲೈಂಗಿಕ ದೌರ್ಜನ್ಯ
ಈ ಆರೋಪಿಗಳು ವಿದ್ಯಾರ್ಥಿನಿಯರಿಗೆ ಅಮಲು ಬರಿಸುವ ಔಷಧಿ ನೀಡಿ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದರು. ತಿಂಗಳುಗಳಿಂದ ಈ ಕೃತ್ಯ ನಡೆಯುತ್ತಿತ್ತು ಎಂದು ಪೊಲೀಸರ ತನಿಖೆಯಿಂದ ಬಯಲಾಗಿದೆ.
ವಸತಿ ಶಾಲೆಯ ಡಿ. ದರ್ಜೆ ನೌಕರ ಸುರೇಶ್ ಎಂಬಾತ ಮೊದಲಿಗೆ ಪ್ಯಾರಾ ಮೆಡಿಕಲ್ ಕೋರ್ಸ್ ಕೊಡಿಸುತ್ತೇನೆ ಎಂದು ವಿದ್ಯಾರ್ಥಿನಿಯರನ್ನು ಪುಸಲಾಯಿಸುತ್ತಿದ್ದ. ಪರೀಕ್ಷೆಯಲ್ಲಿ ಪಾಸಾದರೆ ಕೆಲಸ ಸಿಗುತ್ತದೆ ಎಂದು ನಂಬಿಸುತ್ತಿದ್ದ. ಇದಕ್ಕೆ ಒಪ್ಪಿದ ಮಕ್ಕಳ ಪೋಷಕರನ್ನು ನಂಬಿಸಿ ವಿದ್ಯಾರ್ಥಿನಿಯರನ್ನು ಚಂದನಾ ಬಳಿ ಕಳಿಸುತ್ತಿದ್ದ. ಚಂದನಾ ಆರೋಗ್ಯ ಕೇಂದ್ರಕ್ಕೆ ಬರುವ ವಿದ್ಯಾರ್ಥಿನಿಯರನ್ನು ಅಲ್ಲೇ ಉಳಿಸಿಕೊಳ್ಳುತ್ತಿದ್ದಳು. ಕಾಫಿ- ಟೀಯಲ್ಲಿ ಮತ್ತು ಬರುವ ಔಷಧಿ ಬೆರೆಸಿ ವಿದ್ಯಾರ್ಥಿನಿಯರಿಗೆ ನೀಡುತ್ತಿದ್ದಳು. ಅರೆಪ್ರಜ್ಞಾವಸ್ಥೆಯಲ್ಲಿರುತ್ತಿದ್ದ ಮಕ್ಕಳ ಮೇಲೆ ಚಂದನಾ ಲವರ್ ವಿನಯ್ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ ಎಂದು ಪೊಲೀಸರ ತನಿಖೆ ವೇಳೆ ತಿಳಿದುಬಂದಿದೆ.
ಮೂವರು ಆರೋಪಿಗಳ ವಿರುದ್ಧ ಕಡೂರು ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿದೆ.