ಬಾಗಲಕೋಟೆ : ಎರಡೂವರೆ ವರ್ಷಕ್ಕೆ ರಾಜೀನಾಮೆ ಕೊಡುವ ಮಾತಿದ್ದರೆ ಕೊಡಿ. ರಾಜೀನಾಮೆ ಕೊಟ್ಟು ಸುರಕ್ಷಿತವಾದ, ದಕ್ಷ ಆಡಳಿತ ನಡೆಸಿ ಎಂದು ಸಿಎಂ ಸಿದ್ದರಾಮಯ್ಯಗೆ ಸಂಸದ ಗೋವಿಂದ ಕಾರಜೋಳ ಆಗ್ರಹಿಸಿದರು.
ಬಾಗಲಕೋಟೆಯಲ್ಲಿ ಮಾತನಾಡಿದ ಅವರು, ನಿಮ್ಮಲ್ಲಿ ಗೌರವಯುತ ಒಪ್ಪಂದ ಆಗಿದರೆ, ಎರಡೂವರೆ ವರ್ಷಕ್ಕೆ ರಾಜೀನಾಮೆ ಕೊಡುವ ಮಾತಿದರೆ, ರಾಜೀನಾಮೆ ಕೊಡಿ ಎಂದು ಸಲಹೆ ನೀಡಿದರು. ಸರ್ಕಾರ ಇವತ್ತು ವಿಧಾನಸಭೆಯಲ್ಲಿ ಆಡಳಿತ ಮಾಡ್ತಿಲ್ಲ. ಹೋಟೆಲ್, ಬಾರ್‌ಗಳಲ್ಲಿ, ಗುಂಪು ಗುಂಪಾಗಿ ಕುರ್ಚಿಗಾಗಿ ಕಾದಾಟ ಮಾಡ್ತಿದ್ದಾರೆ. ಸರ್ಕಾರ ಸಂಪೂರ್ಣ ನಿಷ್ಕ್ರಿಯ ಆಗಿದೆ. ರಾಜ್ಯಪಾಲರು ಕೂಡಲೇ ಸರ್ಕಾರವನ್ನು ಅಮಾನತಿನಲ್ಲಿಟ್ಟು, ರಾಷ್ಟ್ರಪತಿ ಆಡಳಿತ ನಡೆಸಬೇಕೆಂದು ಆಗ್ರಹವಾಗಿದೆ.
ಇಲ್ಲದಿದ್ದರೆ ರಾಜ್ಯ ಸಂಪೂರ್ಣವಾಗಿ ಹಾಳಾಗಿ ಹೋಗುತ್ತೆ. ಜನ ಸಂಕಷ್ಟದಲ್ಲಿದ್ದಾರೆ, ಆರ್ಥಿಕವಾಗಿ ದಿವಾಳಿಯಾಗಿರುವ ಸರ್ಕಾರ ದಿನಾಲು ಹೊಸ ಹೊಸ ನಾಟಕಗಳನ್ನ ಮಾಡಿ, ಜನರಿಗೆ ಮೋಸ ಮಾಡುತ್ತಿದೆ. ದಿಕ್ಕು ತಪ್ಪಿಸುವ ಕೆಲಸವನ್ನು ಸಿದ್ದರಾಮಯ್ಯ ಸರ್ಕಾರ ಮಾಡ್ತಿದೆ ಎಂದು ವಾಗ್ದಾಳಿ ನಡೆಸಿದರು.
ಮಾಜಿ ಸಿಎಂ ಸದಾನಂದಗೌಡರ ಹೇಳಿಕೆ ಕುರಿತು ಮಾತನಾಡಿ, ಡಿಕೆ ಶಿವಕುಮಾರ್ ಜೊತೆ ಸೇರಿ ಸರ್ಕಾರ ಮಾಡೋಕೆ ರೆಡಿ ಇದ್ದೀವಿ ಅಂತ ಅಲ್ಲ. ನಮ್ಮದೊಂದು ರಾಜಕೀಯ ಪಕ್ಷ. ನಾವು ರಾಜಕೀಯ ಅಸ್ಥಿರತೆ ಉಂಟಾದಾಗ, ಕಣ್ಣು ಮುಚ್ಚಿ ಕೂರೋಕೆ ಆಗುವುದಿಲ್ಲ. ನಾವು ಒಂದು ರಾಜಕೀಯ ಪಕ್ಷವಾಗಿ, ವಿರೋಧ ಪಕ್ಷವಾಗಿ ಏನೆಲ್ಲಾ ಕ್ರಮಗಳನ್ನು ಜರುಗಿಸಬೇಕೋ ಅದನ್ನು ಜರುಗಿಸುತ್ತೇವೆ. ಆದರೆ ಒಂದು ಮಾತನ್ನು ಹೇಳುತ್ತೇವೆ.
ಯಾವುದೇ ಕಾರಣಕ್ಕೂ ಸರ್ಕಾರದಲ್ಲಿ ಭಾಗಿಯಾಗುವುದಿಲ್ಲ. ನಾವು ಚುನಾವಣೆಗೆ ಹೋಗಬೇಕು ಅಂತ ಹೇಳುತ್ತೇವೆ. ನಾವು ಯಾವುದೇ ಕಾರಣಕ್ಕೂ ಈ ಸರ್ಕಾರದೊಂದಿಗೆ ಕೈಜೋಡಿಸುವ ಪ್ರಶ್ನೆಯೇ ಇಲ್ಲ. ಸದಾನಂದಗೌಡರು ತಮ್ಮ ಅಭಿಪ್ರಾಯ ಹೇಳಿರಬಹುದು. ಒಂದು ಪ್ರತಿಪಕ್ಷವಾಗಿ ದುರಾಡಳಿತ ಮಾಡಿರುವ ಸರ್ಕಾರದ ಜೊತೆ ನಾವು ಕೈಜೋಡಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಆದಿಚುಂಚನಗಿರಿ ಸ್ವಾಮೀಜಿಗಳು ಹಿಂದೆಂದೂ ರಾಜಕೀಯದಲ್ಲಿ ಭಾಗವಹಿಸಿಲ್ಲ. 2013 ರಲ್ಲಿ ಸಿಎಂ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಬೇಕಾದರೆ, ಆಗ ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆಗಬೇಕು ಅಂತ ಹೇಳಿಲ್ಲ. 2013 ರಲ್ಲಿ ಮುಖ್ಯಮಂತ್ರಿ ಆಗುವಂತಹ ಒಕ್ಕಲಿಗ ನಾಯಕರು ಯಾರೂ ಇರಲಿಲ್ಲ. ಇವತ್ತು ಡಿಕೆಶಿ ಅವರು ಶ್ರಮಪಟ್ಟು ಪಕ್ಷವನ್ನು ಕಟ್ಟಿದ್ದಾರೆ. ಈ ನಡುವೆ ಕಾಂಗ್ರೆಸ್ ಪಕ್ಷ ಹೈಕಮಾಂಡ್ ಎರಡೂವರೆ ವರ್ಷ, ಎರಡೂವರೆ ವರ್ಷ ಅಂತ ಹೇಳಿದ್ದಾರೆ.
ಅದಕ್ಕಾಗಿ ದುಡಿದಂತ ಒಬ್ಬ ನಾಯಕ ಡಿಕೆಶಿಯವರಿಗೆ ಮುಖ್ಯಮಂತ್ರಿ ಪಟ್ಟ ಸಿಗಲಿ ಅಂತ ಆಶಯ ವ್ಯಕ್ತಪಡಿಸಿದ್ದಾರೆಯೇ ಹೊರತು ಸ್ವಾಮೀಜಿ ಅವರು ರಾಜಕೀಯದಲ್ಲಿ ಭಾಗವಹಿಸಿಲ್ಲ, ವಹಿಸೋದು ಇಲ್ಲ. ಅವರೊಬ್ಬ ಅತ್ಯಂತ ಉತ್ತಮ ಸಂಸ್ಕಾರ ಇರುವಂತಹ ಸ್ವಾಮೀಜಿ. ಅವರು ಇಷ್ಟು ವರ್ಷವಾದರೂ ರಾಜಕೀಯದಲ್ಲಿ ಭಾಗವಹಿಸಿದ್ದನ್ನು ನಾನು ನೋಡಿಲ್ಲ. ಬಾಲಗಂಗಾಧರನಾಥ ಶ್ರೀಗಳ ಬಳಿಕ ಇವರು ಆ ಪೀಠಕ್ಕೆ ಬಂದಮೇಲೆ ಯಾವುತ್ತೂ ಸಹ ರಾಜಕೀಯ ಮಾತನಾಡಿಲ್ಲ ಎಂದು ತಿಳಿಸಿದರು.
ಆದರೆ ಇವತ್ತು ದುಡಿದಂತ ಒಬ್ಬ ನಾಯಕನಿಗೆ ಸಿಗಬೇಕೆನ್ನುವ ಆಶಯವನ್ನು ವ್ಯಕ್ತಪಡಿಸಿದ್ದಾರೆ. ಹಿಂದೆಯೂ ಸಹ ದೇವೇಗೌಡರು ಮುಖ್ಯಮಂತ್ರಿ ಆಗುವ ಸಂದರ್ಭದಲ್ಲಿ ಇಡೀ ಸಮುದಾಯವೇ ಅವರು ಸಿಎಂ ಆಗಬೇಕು ಅಂತ ಅಪೇಕ್ಷೆ ಪಟ್ಟರು. ಅವತ್ತು ಅವರನ್ನು ಮುಖ್ಯಮಂತ್ರಿ ಮಾಡಿದರು. ಅಂದು ಇಡೀ ಸಮುದಾಯವೇ ವಿಧಾನಸೌಧಕ್ಕೆ ನುಗ್ಗಿ ಬಂತು.
ಏಕೆಂದರೆ ದೇವೇಗೌಡರು ಒಬ್ಬ ರೈತ ನಾಯಕರು, ಹೋರಾಟಗಾರರು, ರಾಜಕೀಯ, ಸಾಮಾಜಿಕ ಕ್ಷೇತ್ರದಲ್ಲಿ ಕೆಲಸ ಮಾಡಿದವರು. ಅವರಿಗೊಂದು ಅವಕಾಶ ಸಿಗಲಿ ಅಂತ ಒಂದು ಆಶಯ ವ್ಯಕ್ತಪಡಿಸಿದರು ಅಷ್ಟೇ. ಅದೇ ರೀತಿ ಇವತ್ತು ಡಿಕೆಶಿ ಅವರಿಗೆ ಸಿಗಲಿ ಎನ್ನುವಂತಹ ಆಶಯ ವ್ಯಕ್ತಪಡಿಸಿದ್ದಾರೆ ಅಷ್ಟೆ. ಆದರೆ, ಅವರು ರಾಜಕಾರಣದಲ್ಲಿ ಭಾಗವಹಿಸಿಲ್ಲ ಎಂದರು.















