ಮಂಗಳೂರು: ನಾನು ರೌಡಿಶೀಟರ್ ಅಲ್ಲ, ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಯಾವುದೇ ಹಣವನ್ನು ಬಾಕಿ ಇರಿಸಿಕೊಂಡಿಲ್ಲ ಎಂದು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ನೂತನ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ ಸ್ಪಷ್ಟನೆ ನೀಡಿದ್ದಾರೆ.
ಕುಕ್ಕೆ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ರೌಡಿಶೀಟರ್ ಆಯ್ಕೆ ಎಂದು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿತ್ತು. ಈ ಕುರಿತು ಮಾತನಾಡಿದ ಅವರು 25 ವರ್ಷಗಳ ಹಿಂದೆ ಅಂಗಡಿ ಗುತ್ತಿಗೆ ಪಡೆದ ವೇಳೆ ದೇವಸ್ಥಾನಕ್ಕೆ ಹಣ ನೀಡಲು ಬಾಕಿ ಇತ್ತು. ಆ ಬಳಿಕ ನನ್ನ ಮೇಲೆ ಚೆಕ್ ಬೌನ್ಸ್ ಪ್ರಕರಣ ಕೂಡ ದಾಖಲಾಗಿತ್ತು. ನನ್ನ ತಪ್ಪನ್ನು ಅರಿತು ಮುಂದಿನ ಎರಡು ವರ್ಷಗಳಲ್ಲಿ ಎಲ್ಲಾ ಬಾಕಿ ಕ್ಲೀಯರ್ ಮಾಡಿದ್ದೇನೆ ಎಂದು ಹೇಳಿದ್ದಾರೆ.
ರಾಜಕೀಯ ಷಡ್ಯಂತ್ರದಿಂದ ಆಗ ನನ್ನ ಮೇಲೆ ಸುಳ್ಯ ಇನ್ಸ್ಪೆಕ್ಟರ್ ರೌಡಿಶೀಟ್ ಓಪನ್ ಮಾಡಿದ್ದರು. ಆದರೆ 15 ವರ್ಷಗಳ ಹಿಂದೆ ನನ್ನ ಸನ್ನಡತೆ ಗಮನಿಸಿ ರೌಡಿಶೀಟ್ ರದ್ದು ಮಾಡಲಾಗಿದೆ. ಇದಾದ ಬಳಿಕ ನಾನು ಕುಕ್ಕೆ ಸುಬ್ರಹ್ಮಣ್ಯದಲ್ಲಿ ಗೌರವಯುತವಾಗಿ ಜೀವನ ನಡೆಸುತ್ತಿದ್ದೇನೆ ಎಂದಿದ್ದಾರೆ.
ನಾನು ಅಧ್ಯಕ್ಷನಾಗಿರುವುದನ್ನು ಗಮನಿಸಿ ನನ್ನ ರಾಜಕೀಯ ಮತ್ತು ವ್ಯವಹಾರಿಕ ವಿರೋಧಿಗಳು ಷಡ್ಯಂತ್ರ ಮಾಡಿದ್ದಾರೆ. ನಾನು ಅಧ್ಯಕ್ಷನಾದ್ರೆ ಬಿಜೆಪಿ ಅವಧಿಯಲ್ಲಿ ದೇವಸ್ಥಾನದಲ್ಲಿ ಆದ ಅವ್ಯವಹಾರ ಹೊರಗೆ ಹಾಕ್ತೇನೆ ಎಂಬ ಭಯದಲ್ಲಿ ಇದ್ದಾರೆ. ಸುಬ್ರಹ್ಮಣ್ಯ ದೇವಸ್ಥಾನಕ್ಕೆ 2 ರಿಂದ 3 ಕೋಟಿ ರೂ. ಬಾಡಿಗೆ ಬಾಕಿ ಇರಿಸಲಾಗಿದೆ. ಬಿಜೆಪಿ ಅವಧಿಯಲ್ಲಿ ಸಾಕಷ್ಟು ಅವ್ಯವಹಾರ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಆಗಿದೆ ಕಿಡಿಕಾರಿದರು.














